ಫ್ರಾನ್ಸ್‌ನ 50 ವರ್ಷಗಳ ಇತಿಹಾಸದಲ್ಲಿ ನಿಕೋಲಸ್ ಸರ್ಕೋಜಿ ಅವರು ಅತ್ಯಂತ ಜನಪ್ರಿಯತೆ ಕಳೆದುಕೊಂಡ ಫ್ರೆಂಚ್ ಅಧ್ಯಕ್ಷರಾಗಿದ್ದಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.
'ಸರ್ಕೋಜಿ ಅವರ ಜನಪ್ರಿಯತೆ ಶೇ.29ರಷ್ಟು ಕುಸಿತ ಕಂಡಿದೆ, ಇದು ಸೆಪ್ಟೆಂಬರ್ ತಿಂಗಳಿಗಿಂತ ಮತ್ತೆ ಶೇ.3ರಷ್ಟು ಕುಸಿತ ಕಂಡಂತಾಗಿದೆ ಎಂದು ಫ್ರಾನ್ಸ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಪಡಿಸಿರುವುದಾಗಿ ಡೈಲಿ ಮೇಲ್ ವರದಿ ವಿವರಿಸಿದೆ.
ಫ್ರಾನ್ಸ್‌ನಲ್ಲಿ 1958ರಲ್ಲಿ ನೂತನ ಸಂವಿಧಾನ ಜಾರಿಗೆ ಬಂದ ನಂತರದ ಅಧ್ಯಕ್ಷರಲ್ಲಿ ನಿಕೋಲಸ್ ಸರ್ಕೋಜಿ ಹೆಚ್ಚು ಜನಪ್ರಿಯತೆ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಫ್ರಾನ್ಸ್‌ನಲ್ಲಿ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಸುವ ಸರ್ಕೋಜಿ ಅವರ ನಿರ್ಧಾರಕ್ಕೆ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದು ಸರ್ಕೋಜಿಯ ಜನಪ್ರಿಯತೆ ಕುಸಿಯಲು ಎಡೆಮಾಡಿಕೊಟ್ಟಿತ್ತು.
ಅಚ್ಚರಿಕರ ಬೆಳವಣಿಗೆ ಎಂದರೆ ಫ್ರಾನ್ಸ್‌ನ ಶೇ.57ರಷ್ಟು ಜನರು ಯೂನಿಯನ್ಸ್ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ಬಹಿರಂಗಗೊಳಿಸಿದೆ. ಸುಮಾರು ಶೇ.71ರಷ್ಟು ಜನರು ಸರ್ಕೋಜಿ ಅವರ ಸಾರ್ವಜನಿಕ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ.73ರಷ್ಟು ಖಾಸಗಿ ವಲಯದ ನೌಕರರು ಹಾಗೂ ಶೇ.79ರಷ್ಟು ಸಾಮಾನ್ಯ ನೌಕರರು ಇದು ಸರ್ಕೋಜಿಯ ದೌಲತ್ತಿನ ಆಡಳಿತ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.