ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆಯಲ್ಲೇ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಸುಮಾರು 65 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಅಫ್ಘಾನಿಸ್ತಾನದ ಕುಗ್ರಾಮವೊಂದರಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯದ ಬಾಗ್ಲಾನ್ನ ಕುಗ್ರಾಮವಾದ ಜೆಲ್ಗಾ ಎಂಬಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದವರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೂರು ಮಹಡಿಯ ಮನೆಯೊಂದರಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಒಂದು ಮೇಲ್ಛಾವಣಿ ಕುಸಿದು ಬಿದ್ದಿತ್ತು. ಆದರೆ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ ಎಂದು ಬಾಗ್ಲಾನ್ ರಾಜ್ಯಪಾಲ ಮುನ್ಶಿ ಅಬ್ದುಲ್ ಮಾಜಿದ್ ಬಿಬಿಸಿಗೆ ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ 65 ಮಂದಿ ಸಾವನ್ನಪ್ಪಿದ್ದು, ಸುಮಾರು 40ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ಅಫ್ಘಾನ್ ರೆಡ್ ಕ್ರೆಸೆಂಟ್ ತಿಳಿಸಿದೆ. ಘಟನೆ ನಡೆದಿರುವ ಸ್ಥಳ ತುಂಬಾ ಕುಗ್ರಾಮವಾಗಿದ್ದರಿಂದ ಆ ಸ್ಥಳಕ್ಕೆ ವಾಹನ ತೆರಳಲು ಕೂಡ ಕಷ್ಟವಾಗಿದೆ. ಆದರೂ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತರಲು ಶ್ರಮಿಸಲಾಗುತ್ತಿದೆ ಎಂದು ಬಾಗ್ಲಾನ್ ಆರೋಗ್ಯಾಧಿಕಾರಿ ಡಾ.ಸಲೀಮ್ ರಾಸೋಲಿ ಹೇಳಿದ್ದಾರೆ.