ನೇಪಾಳಿ ಕಾಂಗ್ರೆಸ್ ಮುಖಂಡ ರಾಮಚಂದ್ರಾ ಪೌಡ್ಯಾಲ್ ಅವರು ಪ್ರಧಾನಿ ಆಯ್ಕೆಗಾಗಿ ಶುಕ್ರವಾರ ನಡೆದ 14ನೇ ಸುತ್ತಿನ ಚುನಾವಣೆಯಲ್ಲೂ ಬಹುಮತ ಪಡೆಯಲು ವಿಫಲರಾಗಿದ್ದಾರೆ. ಈ ಮೂಲಕ ನೇಪಾಳ ನೂತನ ಪ್ರಧಾನಿ ಆಯ್ಕೆ ಬಿಕ್ಕಟ್ಟು ಮುಂದುವರಿದಂತಾಗಿದೆ.
ಕಳೆದ ಜೂನ್ ತಿಂಗಳಿನಿಂದ ನೇಪಾಳ ನೂತನ ಪ್ರಧಾನಿ ಆಯ್ಕೆಗಾಗಿ 14 ಸುತ್ತು ಚುನಾವಣೆ ನಡೆದಿತ್ತು. ಈ ಮೊದಲು ನಡೆದ 12 ಸುತ್ತಿನ ಚುನಾವಣೆಯಲ್ಲಿ ಮಾವೋ ಪಕ್ಷದ ವರಿಷ್ಠ ಪ್ರಚಂಡ ಅವರು ಸ್ಪರ್ಧೆಯಲ್ಲಿದ್ದರು. ನಂತರ ಪ್ರಚಂಡ ಪ್ರಧಾನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಇದೀಗ ಪ್ರಧಾನಿ ಆಯ್ಕೆ ಸ್ಪರ್ಧೆಯಲ್ಲಿ ನೇಪಾಳಿ ಕಾಂಗ್ರೆಸ್ ಮುಖಂಡ ಪೌಡ್ಯಾಲ್ ಒಬ್ಬರೇ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆದರೂ ಶುಕ್ರವಾರ ನಡೆದ 14ನೇ ಸುತ್ತಿನ ಚುನಾವಣೆಯಲ್ಲಿ ಪೌಡ್ಯಾಲ್ ಅವರು 96 ಮತಗಳನ್ನು ಪಡೆದಿದ್ದು, ಗೆಲುವು ಸಾಧಿಸಲು ವಿಫಲರಾಗಿದ್ದಾರೆ.
ಆ ನಿಟ್ಟಿನಲ್ಲಿ ನೂತನ ಪ್ರಧಾನಿ ಆಯ್ಕೆಗಾಗಿ ನವೆಂಬರ್ 1ರಂದು 15ನೇ ಸುತ್ತಿನ ಚುನಾವಣೆ ನಡೆಯಲಿದೆ. ಆದರೆ ಮತ್ತೆ ಪ್ರಧಾನಿ ಆಯ್ಕೆ ನಡೆಯದಿದ್ದರೆ, ಬಿಕ್ಕಟ್ಟು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.