ಇಸ್ಲಾಮಾಬಾದ್, ಶನಿವಾರ, 30 ಅಕ್ಟೋಬರ್ 2010( 15:20 IST )
ದೇಶದ ವಿಶೇಷ ಆರ್ಥಿಕ ವಲಯದೊಳಗೆ ಅಕ್ರಮವಾಗಿ ಪ್ರವೇಶಿಸಿದ 32 ಭಾರತೀಯ ಮೀನುಗಾರರನ್ನು ಹಾಗೂ ಆರು ಮೀನುಗಾರಿಕಾ ಬೋಟ್ ಅನ್ನು ಪಾಕಿಸ್ತಾನಿ ಅಧಿಕಾರಿಗಳು ಸೆರೆ ಹಿಡಿದಿರುವುದಾಗಿ ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಕರಾವಳಿ ಪ್ರದೇಶದಿಂದ 60 ನಾಟಿಕಲ್ ಮೈಲ್ಸ್ ದೂರದಲ್ಲಿ ಭಾರತೀಯ ಮೀನುಗಾರರನ್ನು ಕರಾವಳಿ ಭದ್ರತಾ ಪಡೆ ಅಧಿಕಾರಿಗಳು ಸೆರೆ ಹಿಡಿದಿರುವುದಾಗಿ ಹೇಳಿದ್ದಾರೆ.
ಬಂಧಿತ ಭಾರತೀಯ ಮೀನುಗಾರರನ್ನು ದಕ್ಷಿಣ ಬಂದರು ನಗರಿಯಾದ ಕರಾಚಿಗೆ ಕರೆದೊಯ್ಯಲಾಗಿದೆ. ಅವರೆಲ್ಲರನ್ನೂ ಭದ್ರತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರತಿವರ್ಷವೂ ಭಾರತ ಮತ್ತು ಪಾಕಿಸ್ತಾನ ಕರಾವಳಿ ಪ್ರದೇಶದ ಗಡಿಯನ್ನು ಉಲ್ಲಂಘಿಸಿ ಒಳಪ್ರವೇಶಿಸುವ ಮೀನುಗಾರರನ್ನು ಸೆರೆ ಹಿಡಿಯುತ್ತದೆ. ಪಾಕಿಸ್ತಾನ ಇತ್ತೀಚೆಗಷ್ಟೇ 442 ಮೀನುಗಾರರನ್ನು ಬಂಧಮುಕ್ತಗೊಳಿಸಿತ್ತು. ಬಂಧಿತ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಬೇಕೆಂದು ಕೋರಿ ಎರಡು ಎನ್‌ಜಿಓಗಳು ಪಾಕ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.