ನೇಪಾಳದ ಪೊಲೀಸರು ಅಂತಾರಾಷ್ಟ್ರೀಯ ಕಳ್ಳನೋಟು ಜಾಲವನ್ನು ಪತ್ತೆ ಹಚ್ಚಿದ್ದು, ಆ ನಿಟ್ಟಿನಲ್ಲಿ ಇಬ್ಬರು ಭಾರತೀಯ, ಒರ್ವ ಪಾಕಿಸ್ತಾನಿ ಸೇರಿದಂತೆ ಒಂಬತ್ತು ಮಂದಿಯನ್ನು ರಾಜಧಾನಿಯಲ್ಲಿ ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಸಿನಾಮಂಗಾಲ್ ಪ್ರದೇಶದಲ್ಲಿ ಶಂಕಿತ ಒಂಬತ್ತು ಮಂದಿಯನ್ನು ಸುಮಾರು 40 ಲಕ್ಷ ರೂ. ಮೌಲ್ಯದ ಭಾರತೀಯ ಖೋಟಾ ನೋಟ್ಗಳೊಂದಿಗೆ ಬಂಧಿಸಲಾಗಿದೆ ಎಂದು ಕಾಠ್ಮಂಡು ಮೆಟ್ರೊಪೊಲಿಟಿಯನ್ ಪೊಲೀಸರು ವಿವರಿಸಿದ್ದಾರೆ.
ಬಂಧಿತರನ್ನು ಬಿಹಾರದ ಮೋಕ್ತಾರ್ ಅನ್ಸಾರಿ, ಇಶಾಮುದ್ದೀನ್ ಮಿಯಾ, ಪಾಕಿಸ್ತಾನದ ಅಬ್ದುಲ್ ಬಾಹಾಬ್ ಹಾಗೂ ನೇಪಾಳದ ಬೀರೇಂದ್ರಾ ಶಾ, ಅಫ್ತಾಬ್ ಅಲಾಂ ಅನ್ಸಾರಿ, ಚೋಕಾಟ್ ಮಹಾತೋ, ಯೂನೂಸ್ ಅನ್ಸಾರಿ, ಬಿನೋದ್ ಖಾತ್ರಿ, ಟೆಕ್ ಬಾಹಾದೂರ್ ಕಾರ್ಕಿ ಎಂದು ಗುರುತಿಸಲಾಗಿದೆ.