ಬಾಗ್ದಾದ್ ಚರ್ಚ್‌ವೊಂದರಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಏಕಾಏಕಿ ಅಲ್ ಖಾಯಿದಾ ಸಂಘಟನೆಯ ಉಗ್ರರು ದಾಳಿ ನಡೆಸಿದ ಪರಿಣಾಮ 37 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದ್ದು, ಕೆಲವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ನಂತರ ಅಮೆರಿಕ ಮತ್ತು ಇರಾಕ್ ಪಡೆಗಳ ಕಾರ್ಯಾಚರಣೆಯಿಂದಾಗಿ 12ಕ್ಕೂ ಅಧಿಕ ಒತ್ತೆಯಾಳುಗಳನ್ನು ಬಂಧಮುಕ್ತಗೊಂಡಿದ್ದಾರೆ.
ಚರ್ಚ್ ಮೇಲಿನ ದಾಳಿಯ ಹೊಣೆಯನ್ನು ಅಲ್ ಖಾಯಿದಾ ಸಂಘಟನೆ ಹೊತ್ತುಕೊಂಡಿದೆ. ಸೆಂಟ್ರಲ್ ಬಾಗ್ದಾದ್‌ನಲ್ಲಿರುವ ಸಾಯಿದಾತ್ ಅಲ್ ನೆಜಾತ್ ಚರ್ಚ್ ಮೇಲೆ ದಾಳಿ ನಡೆಸಿದ್ದ ಎಂಟು ಮಂದಿ ಉಗ್ರರು ಅಮೆರಿಕ, ಇರಾಕ್ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗ್ದಾದ್ ಶೇರುಪೇಟೆ ಕೇಂದ್ರ ಕಚೇರಿ ಸಮೀಪದ ಚರ್ಚ್ ಮೇಲೆ ಸಾಮೂಹಿಕವಾಗಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಜಂಟಿ ಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಂಧಮುಕ್ತ ಮಾಡಲಾಗಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ. ಚರ್ಚ್ ಒಳಗೆ ಮೊದಲು ಆಗಮಿಸಿದ ಶಸ್ತ್ರಧಾರಿ ವ್ಯಕ್ತಿ ಪಾದ್ರಿಯನ್ನು ಮೊದಲು ಗುಂಡಿಕ್ಕಿ ಕೊಂದಿರುವುದಾಗಿ ಬಂಧಮುಕ್ತಗೊಂಡಿರುವ 18ರ ಹರೆಯದ ಯುವಕನೊಬ್ಬ ಘಟನೆ ಕುರಿತು ವಿವರಿಸಿದ್ದಾನೆ.
ಅವರೆಲ್ಲರೂ ಆಯುಧದೊಂದಿಗೆ ಮಿಲಿಟರಿ ಸಮವಸ್ತ್ರಧಾರಿಯಾಗಿ ಚರ್ಚ್‌ನ ಪ್ರಾರ್ಥನಾ ಕೋಣೆಗೆ ಆಗಮಿಸಿದ್ದರು. ನಂತರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು ಎಂದು ತಿಳಿಸಿದ್ದಾನೆ.