ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲೀದಾ ಜಿಯಾ ಪುತ್ರನನ್ನು ಬಂಧಿಸುವಂತೆ ಢಾಕಾ ಕೋರ್ಟ್ ಭಾನುವಾರ ಆದೇಶ ಹೊರಡಿಸಿದೆ ಎಂದು ಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
2008ರಿಂದ ಥಾಯ್‌ಲ್ಯಾಂಡ್‌ನಲ್ಲಿ ಠಿಕಾಣಿ ಹೂಡಿರುವ ಜಿಯಾ ಪುತ್ರ ಅರಾಫತ್ ರಾಜಾಹ್‌ಮನ್, ತಾನು ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ 2007ರಲ್ಲಿ ಅರಾಫತ್‌ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಮಾನವೀಯತೆ ನೆಲೆಯಲ್ಲಿ ಕೋರ್ಟ್ ಅರಾಫತ್‌ಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿತ್ತು.
ಇದೀಗ ಅರಾಫತ್ ಬಂಧನಕ್ಕೆ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ಇಂಟರ್‌ಪೋಲ್ ನೆರವು ಪಡೆಯುವುದಾಗಿ ಅಟಾರ್ನಿ ಜನರಲ್ ಮುಹ್‌ಬುಬೇ ಅಲಾಮ್ ತಿಳಿಸಿದ್ದಾರೆ.