ತಮಗೆ ವಹಿಸಿದ್ದ ಜವಾಬ್ದಾರಿಯಲ್ಲಿ ಕಳಪೆ ನಿರ್ವಹಣೆ ಮಾಡಿದ್ದ ಏಳು ಮಂದಿ ಸಚಿವರನ್ನು ವಜಾಗೊಳಿಸಿರುವುದಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ ಸೋಮವಾರ ತಿಳಿಸಿದ್ದು, ಉತ್ತಮ ಆಡಳಿತದ ದೃಷ್ಟಿಯಲ್ಲಿ ಸಚಿವ ಸಂಪುಟ ಪುನಾರಚಿಸುವುದಾಗಿ ಘೋಷಿಸಿದ್ದಾರೆ.
ದೇಶದಲ್ಲಿರುವ ಬಡವರ ಜೀವನ ಮಟ್ಟ ಸುಧಾರಿಸಲು ಪ್ರತಿಯೊಬ್ಬರು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಸರಕಾರಕ್ಕೆ ಸಲಹೆ ನೀಡಲಾಗಿತ್ತು ಎಂದು ಅಧ್ಯಕ್ಷರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ವಿವಾದಿತ ಸಚಿವ ಸಿಫಿವೆ ನೈಯಂಡಾ ಅವರನ್ನು ಕೂಡ ಸಂಪುಟದಿಂದ ಕೈಬಿಡಲಾಗಿದೆ. ಇದೀಗ ಸಚಿವ ಸಂಪುಟ ಪುನಾರಚನೆಯಲ್ಲಿ ಫೈಯರ್‌ಬ್ರಾಂಡ್ ಎಂದೇ ಹೆಸರುಗಳಿಸಿರುವ ಫಿಕ್ಲೈ ಮಬಾಲುಲಾ ಸೇರ್ಪಡೆಗೊಳ್ಳುವ ಬಗ್ಗೆ ಜುಮಾ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಜನರಿಗೆ ಮುಖ್ಯವಾಗಿ ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ ಹಾಗೂ ರಕ್ಷಣೆಯನ್ನು ಸಮರ್ಪಕವಾಗಿ ನೀಡಬೇಕಾಗಿದೆ. ಹಾಗಾಗಿ ಆ ನಿಟ್ಟಿನಲ್ಲಿ ಸರಕಾರ ಉತ್ತಮ ಆಡಳಿತ ನೀಡುವತ್ತ ಹೆಜ್ಜೆ ಇಡಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.