ಬಲೂಚಿಸ್ತಾನದ ವಾಯುವ್ಯ ಪ್ರಾಂತ್ಯದಲ್ಲಿನ ಪಾಕಿಸ್ತಾನ ಸ್ವಾಮಿತ್ವದ ತೈಲ ಮತ್ತು ಗ್ಯಾಸ್ ಡೆವಲಪ್ಮೆಂಟ್ ಕಂಪನಿಯ ಏಳು ಮಂದಿ ನೌಕರರನ್ನು ಶಸ್ತ್ರಾಸ್ತ್ರಧಾರಿ ಗುಂಪೊಂದು ಅಪಹರಿಸಿಕೊಂಡು ಹೋಗಿರುವ ಘಟನೆ ಮಂಗಳವಾರ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾಫ್ರಾಬಾದ್ ಜಿಲ್ಲೆಯ ಡಿಸ್ಕೋ ಪುಲ್ ಎಂಬ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಕಾರಿ ಅಧಿಕಾರಿಗಳನ್ನು ಅಪಹರಿಸಿಕೊಂಡು ಹೋಗಲಾಗಿದ್ದು, ಅವರನ್ನು ಆಗಂತುಕರು ರಹಸ್ಯ ಸ್ಥಳಕ್ಕೆ ಕೊಂಡೊಯ್ದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಈ ಅಧಿಕಾರಿಗಳು ಮಾರ್ಕೆಟ್ಗೆ ಭೇಟಿ ನೀಡಿದ ನಂತರ ಕಚೇರಿಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಅಪಹರಿಸಲಾಗಿತ್ತು. ಇದೀಗ ಅಪಹರಣಗೊಂಡವರ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿರುವ ಪೊಲೀಸರು, ಅಪಹರಣ ಪ್ರಕರಣವನ್ನು ಈವರೆಗೂ ಯಾವ ಸಂಘಟನೆಯೂ ಹೊತ್ತೊಕೊಂಡಿಲ್ಲ ಎಂದು ಹೇಳಿದ್ದಾರೆ.