ಅಲ್ ಖಾಯಿದಾ ವರಿಷ್ಠ ಒಸಾಮ ಬಿನ್ ಲಾಡೆನ್ ಅಫ್ಘಾನಿಸ್ತಾನದಲ್ಲಿ ಅಡಗಿಕೊಂಡಿಲ್ಲ ಎಂದು ಅಫ್ಘಾನಿಸ್ತಾನದ ಸಚಿವರೊಬ್ಬರು ತಿಳಿಸಿದ್ದಾರೆ.
ಅಲ್ ಖಾಯಿದಾ ಸಂಘಟನೆಯ ಮುಖಂಡ ಒಸಾಮ ಯಾವ ಪ್ರದೇಶದಲ್ಲಿ ಅಡಗಿಕೊಂಡಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಅಫ್ಘಾನ್ ವಿದೇಶಾಂಗ ಸಚಿವ ಜಾಲ್‌ಮೇ ರಾಸೌಲ್ ತಿಳಿಸಿದ್ದು, ಆತ ಅಫ್ಘಾನಿಸ್ತಾನದಲ್ಲಿ ಅಡಗಿಕೊಂಡಿದ್ದಾನೆಂಬ ವರದಿಯನ್ನು ತಳ್ಳಿಹಾಕಿದ್ದಾರೆ.
ಒಸಾಮ ಅಫ್ಘಾನಿಸ್ತಾನದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಒಂದು ವೇಳೆ ಒಸಾಮ ಅಫ್ಘಾನಿಸ್ತಾನದಲ್ಲಿಯೇ ಠಿಕಾಣಿ ಹೂಡಿದ್ದರೆ ನಾವು ಆತನನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ. ಆತ ಎಲ್ಲಿದ್ದಾನೆಂಬುದು ನನಗೆ ಗೊತ್ತಿಲ್ಲ. ಆದರೆ ಆತ ಅಫ್ಘಾನಿಸ್ತಾನದಲ್ಲಿ ಇಲ್ಲ ಎಂಬುದಾಗಿ ಭರವಸೆ ನೀಡುತ್ತೇನೆ ಎಂದು ರಾಸೌಲ್ ತಿಳಿಸಿರುವುದಾಗಿ ಕ್ಸಿನ್‌ಹುವಾ ವರದಿ ಹೇಳಿದೆ.