ಬಂಧಿತ ಕಮಾಂಡರ್‌ಗಳನ್ನು ಬಿಡುಗಡೆ ಮಾಡಿ: ಪಾಕ್‌ಗೆ ತಾಲಿಬಾನ್
ಇಸ್ಲಾಮಾಬಾದ್, ಸೋಮವಾರ, 8 ನವೆಂಬರ್ 2010( 19:48 IST )
'ನೀವು ಬಂಧಿಸಿರುವ ನಮ್ಮ ಕಮಾಂಡರ್‌ಗಳನ್ನು ಬಿಡುಗಡೆಗೊಳಿಸಿ, ನಾವು ಕೂಡ ಅಪಹರಿಸಿರುವ ವ್ಯಕ್ತಿಗಳನ್ನು ಬಂಧಮುಕ್ತಗೊಳಿಸುತ್ತೇವೆ ಎಂದು ತಾಲಿಬಾನ್ ಉಗ್ರಗಾಮಿ ಸಂಘಟನೆ ಪಾಕಿಸ್ತಾನ ಸರಕಾರಕ್ಕೆ ಸಂದೇಶ ರವಾನಿಸಿದೆ.
'ನಾನು ನನ್ನ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಅವಾಮಿ ನ್ಯಾಷನಲ್ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುತ್ತೇನೆ. ನೀವು ಈ ಉಗ್ರರ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಬೇಕು ಎಂಬುದಾಗಿ ಕೋರುತ್ತೇನೆ' ಎಂದು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಬಿಡುಗಡೆಗೊಳಿಸಿರುವ ವೀಡಿಯೋದಲ್ಲಿ ಅಪಹರಣಗೊಂಡ ಪೇಶಾವರ ಇಸ್ಲಾಮಿಯ ಯೂನಿರ್ವಸಿಟಿಯ ವೈಸ್ ಚಾನ್ಸೆಲರ್ ಅಜ್ಮಲ್ ಖಾನ್ ಈ ರೀತಿ ಅಲವತ್ತುಕೊಂಡಿದ್ದಾರೆ.
ಅಜ್ಮಲ್ ಖಾನ್ ಅವರು ಯೂನಿರ್ವಸಿಟಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ತಾಲಿಬಾನ್ ಉಗ್ರರು ಸೆಪ್ಟೆಂಬರ್ 7ರಂದು ಅಪಹರಿಸಿದ್ದರು. ಏತನ್ಮಧ್ಯೆ ತನ್ನನ್ನು ಅಕ್ಟೋಬರ್ 17ರಂದು ಬಿಡುಗಡೆಗೊಳಿಸಲಿದ್ದಾರೆ ಎಂದು ಖಾನ್ ಮೊದಲ ವೀಡಿಯೋದಲ್ಲಿ ತಿಳಿಸಿದ್ದರು. ಆದರೆ ಉಗ್ರರು ಈವರೆಗೂ ಖಾನ್ ಅವರನ್ನು ಬಿಡುಗಡೆಗೊಳಿಸಿಲ್ಲ.
ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಸೆರೆ ಹಿಡಿಯಲ್ಪಟ್ಟ ತಾಲಿಬಾನ್ ಕಮಾಂಡರ್‌ಗಳನ್ನು ಬಿಡುಗಡೆಗೊಳಿಸುವಂತೆ ನೂತನ ವೀಡಿಯೋದಲ್ಲಿ ಬೇಡಿಕೆ ಇಟ್ಟಿದೆ. ಇದೊಂದು ಸಾಮಾನ್ಯ ಬೇಡಿಕೆಯಾಗಿದ್ದು,ಸರಕಾರ ಇದನ್ನು ಈಡೇರಿಸಬೇಕೆಂದು ಖಾನ್ ಮನವಿ ಮಾಡಿಕೊಂಡಿದ್ದಾರೆ.