ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಪತ್ನಿ ಕಾರ್ಲಾ ಬ್ರೂನಿ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ಹಿಟ್ ಲಿಸ್ಟ್‌ನಲ್ಲಿ ಇದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಬ್ರೂನಿಗೆ ಬಿಗಿ ಬಂದೋಬಸ್ತ್ ನೀಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕೋಜಿ ಪತ್ನಿ ಕಾರ್ಲಾ ಇದೀಗ ಅಲ್ ಖಾಯಿದಾ ಹಿಟ್ ಲಿಸ್ಟ್‌ನಲ್ಲಿ ಇದ್ದು, ಆಕೆಯನ್ನು ಹತ್ಯೆಗೈಯುವ ಸಂಚು ನಡೆಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಉಗ್ರರ ವಿರುದ್ಧ ನಡೆಸುತ್ತಿರುವ ಯುದ್ಧಕ್ಕೆ ಫ್ರಾನ್ಸ್ ಸಾಥ್ ನೀಡಿರುವುದು ಹಾಗೂ ಬುರ್ಖಾವನ್ನು ನಿಷೇಧಿಸಿರುವುದಕ್ಕೆ ಕಿಡಿಕಾರಿರುವ ಒಸಾಮ ಬಿನ್ ಲಾಡೆನ್, ತಾವು ಕೂಡ ಫ್ರಾನ್ಸ್ ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ. ಆ ನಿಟ್ಟಿನಲ್ಲಿ ಬ್ರೂನಿಯ ರಕ್ಷಣೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದ ವಾರವಷ್ಟೇ ಅಲ್ ಖಾಯಿದಾ ವರಿಷ್ಠ ಒಸಾಮ ಬಿನ್ ಲಾಡೆನ್ ಬಿಡುಗಡೆಗೊಳಿಸಿರುವ ನೂತನ ವೀಡಿಯೋ ಟೇಪ್‌ನಲ್ಲಿ, ಇದೊಂದು ಸಿಂಪಲ್ ಸಮೀಕರಣ. ನೀವು ನಮ್ಮನ್ನು ಕೊಂದರೆ, ನಾವು ನಿಮ್ಮನ್ನು ಕೊಲ್ಲುತ್ತೇವೆ ಎಂದು ಬೆದರಿಕೆಯೊಡ್ಡಿದ್ದ.
ಅಲ್ಲದೇ, ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಮತ್ತು ಕಾರ್ಲಾ ಬ್ರೂನಿಯ ಜೀವಕ್ಕೂ ಸಾಕಷ್ಟು ಅಪಾಯವಿದೆ ಎಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ನಿಟ್ಟಿನಲ್ಲಿ ಇಬ್ಬರಿಗೂ ಬಿಗಿ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.