ಅಮೆರಿಕದಲ್ಲಿ 26 ವರ್ಷದ ತಾಯಿಯೊಬ್ಬಳು ಬಟ್ಟೆಗಳ ರಾಶಿಯ ಜೊತೆಯಲ್ಲೇ ತನ್ನ ಹತ್ತು ದಿನದ ಹೆಣ್ಣು ಹಸುಳೆಯನ್ನು ವಾಷಿಂಗ್ ಮೆಷಿನ್‌ನಲ್ಲಿ ಹಾಕಿದ ಪರಿಣಾಮ ಮಗು ದಾರುಣವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಲಿಂಡ್ಸೆ ಡಾನ್ ಫಿಡ್ಲೆರ್ ಎಂಬಾಕೆಯನ್ನು ನಿರ್ಲಕ್ಷ್ಯದಿಂದ ಮಗುವನ್ನು ಕೊಂದಿರುವ ಆರೋಪದ ಮೇಲೆ ಬಂಧಿಸಿರುವುದಾಗಿ ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ.
ಬಟ್ಟೆಯ ರಾಶಿಯನ್ನು ವಾಷಿಂಗ್ ಮೆಷಿನ್‌ಗೆ ಹಾಕಿದ್ದ ನಂತರ ಲಿಂಡ್ಸೆ ಮಗುವಿಗಾಗಿ ಹುಡುಕಾಟ ನಡೆಸಿದ್ದಳು. ಆದರೆ ಮಗು ಎಲ್ಲಿಯೂ ಪತ್ತೆಯಾಗಿಲ್ಲ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಲಿಂಡ್ಸೆಯ ತಂಗಿ ಮ್ಯಾಗಿ ಬಳಿ ತನ್ನ ಮಗು ಎಲ್ಲಿ ಎಂದು ಕೇಳಿದ್ದಳು.ಆಕೆಯೂ ತಾನು ನೋಡಿಲ್ಲ ಎಂದು ತಿಳಿಸಿದ್ದಳು.
ಬಳಿಕ ಇಬ್ಬರು ಮಗುವನ್ನು ಹುಡುಕಾಡಿದ್ದರು. ಏತನ್ಮಧ್ಯೆ ವಾಷಿಂಗ್ ಮೆಷಿನ್‌ನಿಂದ ಕೀರಲು ಸ್ವರ ಹೊರಡುತ್ತಿದ್ದುದನ್ನು ಕೇಳಿಸಿಕೊಂಡು, ವಾಷಿಂಗ್ ಮೆಷಿನ್ ಪರಿಶೀಲಿಸಿದಾಗ ಮಗು ಬಟ್ಟೆಯ ಜೊತೆಯೇ ಸುತ್ತಿ ಸಾವನ್ನಪ್ಪಿದ್ದು ಗಮನಕ್ಕೆ ಬಂದಿರುವುದಾಗಿ ಲಿಂಡ್ಸೆ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಆದರೆ ಮಗು ವಾಷಿಂಗ್ ಮೆಷಿನ್ ಒಳಗೆ ಹೇಗೆ ಹೋಯಿತು ಎಂಬುದು ತನಗೆ ಗೊತ್ತಿಲ್ಲ ಎಂದು ಲಿಂಡ್ಸೆ ಪೊಲೀಸರ ವಿಚಾರಣೆ ವೇಳೆ ಹೇಳಿದ್ದು. ಘಟನೆ ನಂತರ ತಾನು ಐದು ಹೈಡ್ರೋಕೋಡೆನ್ ಮಾತ್ರೆಯನ್ನು ತಿಂದಿರುವುದಾಗಿ ವಿವರಿಸಿದ್ದಾಳೆ. ತಾನು ಮಗುವನ್ನು ಉದ್ದೇಶಪೂರ್ವಕವಾಗಿ ವಾಷಿಂಗ್ ಮೆಷಿನ್‌ನಲ್ಲಿ ಹಾಕಿ ಹತ್ಯೆಗೈದಿಲ್ಲ ಎಂದು ಅಲವತ್ತುಕೊಂಡಿದ್ದಾಳೆ.
ಇದೊಂದು ನಿರ್ಲಕ್ಷ್ಯದಲ್ಲಿ ನಡೆದ ಘಟನೆಯಾಗಿರುವುದಾಗಿ ತಿಳಿಸಿರುವ ಪೊಲೀಸರು, ಲಿಂಡ್ಸೆ ವಿರುದ್ಧ ಕೊಲೆ ಆರೋಪದ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.