ಮಹಿಳೆಯೊಬ್ಬಳ ಮೇಲೆ ಒಂದೇ ರಾತ್ರಿ ಏಳು ಬಾರಿ ಅತ್ಯಾಚಾರ ನಡೆಸಿ, ಫೋಟೋ ತೆಗೆದ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯನೊಬ್ಬನಿಗೆ ಇಲ್ಲಿನ ನ್ಯಾಯಾಲಯ ಆರು ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಅತ್ಯಾಚಾರ ಹಾಗೂ ನಗ್ನ ಫೋಟೋ ತೆಗೆದ ಆರೋಪದ ಮೇಲೆ ವೈದ್ಯ ಅರವಿಂದ ಶರ್ಮಾ(37)ನನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿ ಆರು ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ದಿ ಹೆರಾಲ್ಡ್ ಸನ್ ವರದಿ ಮಾಡಿದೆ.
ಮಹಿಳೆ ತನ್ನ ಮನೆಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಶರ್ಮಾ ಅತಿಯಾದ ಪ್ರಮಾಣದಲ್ಲಿ ಮದ್ಯ ಸೇವಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ತಾನು ವಿರೋಧ ವ್ಯಕ್ತಪಡಿಸಿದ ನಡುವೆಯೂ ಆತ ಸತತವಾಗಿ ಅತ್ಯಾಚಾರ ನಡೆಸಿ ಮೊಬೈಲ್‌ನಿಂದ ಫೋಟೋ ತೆಗೆದಿರುವುದಾಗಿ ಆಕೆ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಶರ್ಮಾ ತಮ್ಮ ವೃತ್ತಿಯಲ್ಲಿ ತುಂಬಾ ಹೆಸರು ಮಾಡಿದ್ದು, ಅವರ ಬಳಿ ಚಿಕಿತ್ಸೆ ಪಡೆಯಲು ರೋಗಿಗಳು ಮುಗಿಬೀಳುತ್ತಾರೆ. ಆದರೆ ಆತ ಮಾಡಿರುವ ಕೃತ್ಯಕ್ಕೆ ಶಿಕ್ಷೆ ಆಗಲೇಬೇಕು. ಆ ಮೂಲಕ ಇಂತಹ ನೀಚ ಕೆಲಸ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗುತ್ತದೆ ಎಂದು ನ್ಯಾಯಾಧೀಶ ಫ್ರಾಂಕ್ ಶೆಲ್ಟನ್ ಅವರು ತೀರ್ಪು ನೀಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.