ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವಜ್ ಮುಶರ್ರಫ್ ಅವರು ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಷ್ ಅವರ ಸೂಚನೆ ಮೇರೆಗೆ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಿದ್ದಾರೆ ಎಂಬ ಮಾಹಿತಿ ಇದೀಗ ಬುಷ್ ಅವರ 'ಡಿಶಿಷನ್ ಪಾಯಿಂಟ್ಸ್' ಪುಸ್ತಕದಿಂದ ಬಯಲಾಗಿದೆ.
ಜಾರ್ಜ್ ಡಬ್ಲ್ಯು ಬುಷ್ ಅವರ ಅಧಿಕಾರಾವಧಿಯ ಜೀವನ ವೃತ್ತಾಂತದ ಬಗ್ಗೆ ಡಿಶಿಷನ್ ಪಾಯಿಂಟ್ಸ್ ಎಂಬ ಪುಸ್ತಕ 2010ರ ನವೆಂಬರ್ 9ರಂದು ಬಿಡುಗಡೆಯಾಗಿತ್ತು. ಆ ಪುಸ್ತಕದಲ್ಲಿನ ಪುಟ ಸಂಖ್ಯೆ 217ರಲ್ಲಿ, 2007ರಲ್ಲಿ ತಾನು ಮುಷರ್ರಫ್ ಅವರಲ್ಲಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವಂತೆ ಕೋರಿದ್ದೆ ಎಂಬುದಾಗಿ ನಮೂದಿಸಿದ್ದಾರೆ. ಅಲ್ಲದೇ, ವಜಾಗೊಳಿಸಿದ ನ್ಯಾಯಾಧೀಶರನ್ನು ಮರು ನೇಮಕ ಮಾಡಿ, ಪಾಕಿಸ್ತಾನದಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ರದ್ದು ಮಾಡುವಂತೆ ಸೂಚಿಸಿರುವುದಾಗಿ ದಿ ನ್ಯೂಸ್ ವರದಿ ಮಾಡಿದೆ.
ಬುಷ್ ಹೇಳಿದ ಮೂರು ಅಂಶಗಳನ್ನು ಈಡೇರಿಸುವುದಾಗಿ ಮುಷರ್ರಫ್ ಭರವಸೆ ನೀಡಿರುವುದಾಗಿಯೂ ಪುಸ್ತಕದಲ್ಲಿ ವಿವರಿಸಲಾಗಿದೆ. ಆ ನಿಟ್ಟಿನಲ್ಲಿ ಮುಷರ್ರಫ್ ಅವರು ಯಾಕೆ ಏಕಾಏಕಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದರು ಎಂಬುದಕ್ಕೆ ಮೊದಲ ಬಾರಿಗೆ ಉತ್ತರ ಸಿಕ್ಕಿದಂತಾಗಿದೆ. ಆದರೆ ಮುಷರ್ರಫ್ ಅವರು ಅಮೆರಿಕದ ಮುಖಂಡರ ವಿಶ್ವಾಸ ಕಳೆದುಕೊಂಡಿದ್ದರು. ಯಾಕೆಂದರೆ ಅಧ್ಯಕ್ಷಗಾದಿಯಿಂದ ಕೆಳಗಿಳಿಯುವಂತೆ ಸೂಚಿಸಿದ ಕೂಡಲೇ ಅದಕ್ಕೆ ವಿರೋಧ ವ್ಯಕ್ತಪಡಿಸಿದೆ ಸಮ್ಮತಿ ಸೂಚಿಸಿರುವುದೇ ಅದಕ್ಕೆ ಕಾರಣವಾಗಿತ್ತು ಎಂದು ವರದಿ ಹೇಳಿದೆ.