ತಮ್ಮ ಅಧಿಕಾರದ ಅವಧಿಯಲ್ಲಿ ರಕ್ಷಣಾ ಒಪ್ಪಂದದ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ 30 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಶ್ರೀಲಂಕಾ ಮಿಲಿಟರಿಯ ಮಾಜಿ ಮುಖ್ಯಸ್ಥ ಸರತ್ ಫೋನ್ಸೆಕಾ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಫೋನ್ಸೆಕಾ ಅವರನ್ನು ಕಳೆದ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ.
ಈ ಸಂದರ್ಭದಲ್ಲಿ ಮಂಗಳವಾರ ಬೆಳಿಗ್ಗೆಯೇ 59ರ ಹರೆಯದ ಫೋನ್ಸೆಕಾ ಅವರನ್ನು ಕೊಲಂಬೊ ಹೈಕೋರ್ಟ್‌ಗೆ ಕರೆ ತಂದಿದ್ದರು. ಎಲ್‌ಟಿಟಿಇ ವಿರುದ್ಧ ಅಂತಿಮ ಸಮರ ಸಾರಿದ್ದ ವೇಳೆಯಲ್ಲಿ ಶರಣಾದ ಎಲ್‌ಟಿಟಿಇ ಮುಖಂಡರನ್ನು ಶೂಟ್ ಮಾಡಿ ಕೊಲ್ಲುವಂತೆ ರಕ್ಷಣಾ ಕಾರ್ಯದರ್ಶಿ ಸೂಚನೆ ನೀಡಿದ್ದರು ಎಂದು ಫೋನ್ಸೆಕಾ ನೀಡಿದ್ದ ಬಹಿರಂಗ ಹೇಳಿಕೆ ಕುರಿತು ದಾಖಲಾಗಿದ್ದ ಪ್ರಕರಣದ ವಿಚಾರಣೆಗಾಗಿ ಕರೆ ತರಲಾಗಿತ್ತು.