ವ್ಯಾಟಿಕನ್ ಸಿಟಿ, ಗುರುವಾರ, 18 ನವೆಂಬರ್ 2010( 13:23 IST )
ಧರ್ಮನಿಂದನೆ ಆರೋಪದಡಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕ್ರಿಶ್ಚಿಯನ್ ಮಹಿಳೆಯನ್ನು ಬಿಡುಗಡೆ ಮಾಡುವಂತೆ ಪೋಪ್ ಬೆನೆಡಿಕ್ಟ್ 16 ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿರುವ ಕ್ರಿಶ್ಚಿಯನ್ ಸಮುದಾಯ ಹಿಂಸಾಚಾರ ಮತ್ತು ಪಕ್ಷಪಾತ ಧೋರಣೆಯಿಂದ ತತ್ತರಿಸಿ ಹೋಗಿದೆ ಎಂದು ಪೋಪ್ ವಾರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಆರೋಪಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಗೊಳಿಸಿರುವ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕ್ರಿಶ್ಚಿಯನ್ ಮಹಿಳೆ ಆಶಿಯ ಬೀಬಿಯನ್ನು ಕೂಡಲೇ ಬಂಧಮುಕ್ತಗೊಳಿಸುವಂತೆ ಅವರು ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಕರೆ ನೀಡಿದ್ದಾರೆ.
ಆಕೆ ತನ್ನ ಧಾರ್ಮಿಕ ಭಾವನೆಯನ್ನಷ್ಟೇ ಹೊರಹಾಕಿದ್ದಾಳೆ. ಪ್ರತಿಯೊಬ್ಬರಿಗೂ ಅವರವರ ಧರ್ಮದ ಮೇಲೆ ನಂಬಿಕೆ ಇರುತ್ತದೆ. ಅದನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯ. ಮಾನವೀಯತೆ ನೆಲೆಯಲ್ಲಿ ಆಕೆಯನ್ನು ಪಾಕಿಸ್ತಾನ ಬಿಡುಗಡೆ ಮಾಡಬೇಕೆಂದು ಪೋಪ್ ಮನವಿ ಮಾಡಿಕೊಂಡಿದ್ದಾರೆ.