ಇಸ್ಲಾಮ್ ವಿರುದ್ಧ ಅವಹೇಳನಕಾರಿಯಾಗಿ ಲೇಖನ ಪ್ರಕಟಿಸಿದ ಆರೋಪದ ಮೇಲೆ ನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸಿರುವ ಈಜಿಪ್ಟ್‌ನ ಪ್ರಮುಖ ಬ್ಲಾಗರ್‌ನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬ್ದೆಲ್ ಕರೀಮ್ ನಾಬಿಲ್ ಎಂಬವರು ತಮ್ಮ ಬ್ಲಾಗ್‌ನಲ್ಲಿ ಮೊಹಮ್ಮದ್ ಪೈಗಂಬರ್ ಅವರ ಸಂದೇಶದ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದರು. ಅಲ್ಲದೇ, ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ದಬ್ಬಾಳಿಕೆಯ ಪ್ರತೀಕ ಎಂದು ಜರೆದಿದ್ದರು. ಈ ಬಗ್ಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಇದು ಇತರ ಬರಹಗಾರರಿಗೆ ಎಚ್ಚರಿಕೆಯ ಸಂದೇಶ ಎಂದು ಈಜಿಪ್ಟ್ ಸರಕಾರ ಹೇಳಿತ್ತು.
ನಾಬಿಲ್ ಬಂಧನಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ನಾಲ್ಕು ವರ್ಷ ಜೈಲುಶಿಕ್ಷೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ಬಂಧಮುಕ್ತಗೊಳಿಸಲಾಯಿತು.
ನಾಬಿಲ್ ಅವರು ಮಾಧ್ಯಮಗಾರರ ಜೊತೆ ಮಾತನಾಡುವ ಮುನ್ನ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಸಹೋದರ ಅಬ್ದೆಲ್ ರೆಹಮಾನ್ ತಿಳಿಸಿದ್ದು, ನಾಬಿಲ್ ಅವರು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ವಿವರಿಸಿದ್ದಾರೆ.
ಕೋರ್ಟ್ ವಿಚಾರಣೆ ವೇಳೆ ನಾಬಿಲ್ ಅವರು, ತಾನು ಇಸ್ಲಾಮ್ ಅನ್ನು ಟೀಕಿಸಿಲ್ಲ. ಮೊಹಮ್ಮದ್ ಪೈಗಂಬರ್ ವ್ಯಕ್ತಿತ್ವ ತುಂಬಾ ಗ್ರೇಟ್, ಆದರೆ ಅವರು ನೀಡಿರುವ ಸಂದೇಶದ ಕಾಲ-ಮಾನದ ಬಗ್ಗೆ ನಾವು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.