ಇಸ್ಲಾಮಾಬಾದ್, ಗುರುವಾರ, 18 ನವೆಂಬರ್ 2010( 18:29 IST )
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ ಹಲವು ಪೊಲೀಸ್ ಅಧಿಕಾರಿಗಳೇ ಅತ್ಯಾಚಾರ ಹಾಗೂ ಮಾನವ ಹಕ್ಕು ಉಲ್ಲಂಘನೆ ಆರೋಪ ಎದುರಿಸುತ್ತಿರುವುದಾಗಿ ವರದಿಯೊಂದು ತಿಳಿಸಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಪೊಲೀಸ್ ಅಧಿಕಾರಿಗಳು ಟಾಪ್‌ಲಿಸ್ಟ್‌ನಲ್ಲಿ ಇರುವುದಾಗಿ ಪ್ರಕರಣದ ಕುರಿತು ತನಿಖೆ ನಡೆಸಿದ ನ್ಯಾಷನಲ್ ಪೊಲೀಸ್ ಬ್ಯುರೋ ಈ ಬಗ್ಗೆ ಆಂತರಿಕ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ 2008ರಲ್ಲಿ 61, 2009ರಲ್ಲಿ 22 ಹಾಗೂ 2010ರಲ್ಲಿ ಎಂಟು ಪ್ರಕರಣಗಳು ದಾಖಲಾಗಿದ್ದು, ಒಟ್ಟು 78 ಪೊಲೀಸ್ ಅಧಿಕಾರಿಗಳು ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.
2008 ತುಂಬಾ ಕೆಟ್ಟ ವರ್ಷವಾಗಿದ್ದು. 61 ಅತ್ಯಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ಪ್ರಕರಣ ಸಿಂಧ್ ಪ್ರಾಂತ್ಯದಲ್ಲಿ ದಾಖಲಾಗಿದ್ದು, 44 ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ವರದಿ ವಿವರಿಸಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಧಿಕಾರಿಯನ್ನು ಜೈಲಿಗೆ ಕಳುಹಿಸಲಾಗಿಲ್ಲ ಎಂದು ದಿ ಎಕ್ಸ್‌ಪ್ರೆಸ್ ಟ್ರೈಬ್ಯುನೆ ಡೈಲಿ ವರದಿ ಮಾಡಿದೆ.
2009ರಲ್ಲಿ ದಾಖಲಾದ 22 ಪ್ರಕರಣಗಳಲ್ಲಿ 31 ಅಧಿಕಾರಿಗಳು ಶಾಮೀಲಾಗಿದ್ದರು ಸಹ, ಕೇವಲ 11 ಅಧಿಕಾರಿಗಳನ್ನು ಜೈಲುಕಂಬಿ ಹಿಂದೆ ತಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ದಾಖಲಾದ ಎಂಟು ಪ್ರಕರಣಗಳಲ್ಲಿ ಮೂರು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಒಬ್ಬ ಅಧಿಕಾರಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.