ಆಸ್ಟ್ರೇಲಿಯ:ಬುರ್ಖಾ-ಸುಳ್ಳು ಕೇಸ್ ಹಾಕಿದ್ದ ಮಹಿಳೆಗೆ ಶಿಕ್ಷೆ
ಸಿಡ್ನಿ, ಶುಕ್ರವಾರ, 19 ನವೆಂಬರ್ 2010( 16:13 IST )
'ತಾನು ಧರಿಸಿದ್ದ ಬುರ್ಖಾದ ಮುಖಪರದೆಯನ್ನು ಪೊಲೀಸ್ ಅಧಿಕಾರಿ ಬಲವಂತವಾಗಿ ತೆಗೆಯಿಸಿರುವುದಾಗಿ ಸುಳ್ಳು ಆರೋಪ ನೀಡಿದ ಮಹಿಳೆಯೊಬ್ಬಳಿಗೆ ಆಸ್ಟ್ರೇಲಿಯ ಕೋರ್ಟ್ ಆರು ತಿಂಗಳ ಜೈಲುಶಿಕ್ಷೆ ವಿಧಿಸಿದೆ' ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಪೊಲೀಸ್ ಅಧಿಕಾರಿಯ ವಿರುದ್ಧವೇ ಸುಳ್ಳು ದೂರು ನೀಡಿದ ಆರೋಪದಡಿಯಲ್ಲಿ ಕಾರ್ನಿಟಾ ಮಾಟ್ಟೇವ್ಸ್ (46) ಎಂಬಾಕೆ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದಲ್ಲದೇ, ಆರು ತಿಂಗಳ ಶಿಕ್ಷೆ ವಿಧಿಸಿರುವುದಾಗಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರ್ನಿಟಾ ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದರು. ನಂತರ ಈಕೆ ಪೊಲೀಸ್ ಅಧಿಕಾರಿ ಬಲವಂತವಾಗಿ ತನ್ನ ಮುಖಪರದೆಯನ್ನು ತೆಗೆಯಿಸಿರುವುದಾಗಿ ದೂರು ನೀಡಿದ್ದಳು.
ಆದರೆ ಆಕೆ ಸುಳ್ಳು ದೂರು ನೀಡಿರುವುದಾಗಿ ತನಿಖೆಯಿಂದ ತಿಳಿದು ಬಂದಿತ್ತು. ಆ ನಿಟ್ಟಿನಲ್ಲಿ ಸುಳ್ಳು ಆರೋಪ ಹೊರಸಿದ್ದಕ್ಕೆ ಕ್ಯಾಂಬೆಲ್ಲ್‌ಟೌನ್ ಸ್ಥಳೀಯ ಕೋರ್ಟ್ ಮ್ಯಾಜಿಸ್ಟ್ರೇಟ್ ರೋಬರ್ಟ್ ರಾಬ್ಬಿಡ್ಜೆ ಆರು ತಿಂಗಳ ಶಿಕ್ಷೆ ವಿಧಿಸಿದ್ದಾರೆ.