ಭಾರತದ ನಕ್ಸಲೀಯರಿಗೆ ಮಾವೋ ಮಾಜಿ ಬಂಡುಕೋರರು ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆಂಬ ಆರೋಪವನ್ನು ನೇಪಾಳದ ಪ್ರಧಾನಿ ಮಾಧವ್ ಕುಮಾರ್ ಶುಕ್ರವಾರ ತಳ್ಳಿಹಾಕಿದ್ದಾರೆ.
ನೆರೆಯ ಭಾರತ ನೇಪಾಳದ ವಿರುದ್ಧ ಮಾಡಿರುವ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಕಳೆದ ತಿಂಗಳು ಭಾರತದ ರಾಯಭಾರಿ ಮಾಡಿರುವ ಆರೋಪದ ಕುರಿತು ವಿವರಣೆ ನೀಡುವಂತೆ ಪ್ರಧಾನಿ ವಿದೇಶಾಂಗ ಮತ್ತು ಗೃಹ ಇಲಾಖೆಯ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದರು.
ನಿಷೇಧಿತ ಲಷ್ಕರ್ ಇ ತೊಯ್ಬಾದ ನೆರವಿನೊಂದಿಗೆ ನೇಪಾಳದ ಮಾವೋವಾದಿಗಳು ಭಾರತದ ಸುಮಾರು 300 ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಮಾಹಿತಿ ಭಾರತಕ್ಕೆ ಲಭ್ಯವಾಗಿದೆ ಎಂದು ನೇಪಾಳದಲ್ಲಿನ ಭಾರತದ ರಾಯಭಾರಿ ಆರೋಪಿಸಿದ್ದರು. ಆದರೆ ಇದಕ್ಕೆ ಖಚಿತ ಪುರಾವೆ ಇಲ್ಲದ ಕಾರಣ, ಈ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಆಯೋಗ ರಚಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ಮಾಧವ್ ಕುಮಾರ್ ತಿಳಿಸಿದ್ದಾರೆ.