ಧರ್ಮನಿಂದನೆ ಆರೋಪದಡಿಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕ್ರಿಶ್ಚಿಯನ್ ಮಹಿಳೆಯ ಗಲ್ಲುಶಿಕ್ಷೆ ಜಾರಿಗೆ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಶುಕ್ರವಾರ ತಡೆಯಾಜ್ಞೆ ನೀಡಿದ್ದಾರೆ.
ಧರ್ಮನಿಂದನೆ ಆರೋಪದಲ್ಲಿ ಆಸಿಯಾ ಬೀಬಿ ಎಂಬಾಕೆಗೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ನಾನ್‌ಕಾನಾ ಸಾಹಿಬ್ ಅವರು, ಪಾಕಿಸ್ತಾನ ದಂಡ ಸಂಹಿತೆ ಅನ್ವಯ ಮರಣದಂಡನೆ ಶಿಕ್ಷೆ ವಿಧಿಸಿದ್ದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಆಸಿಯಾ ಬೀಬಿ ವಿರುದ್ಧ ಇಲ್ಲಿನ ಸ್ಥಳೀಯ ಮಸೀದಿ ಮುಖಂಡ ಖ್ವಾರಿ ಸಲೀಂ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಗಲ್ಲುಶಿಕ್ಷೆ ನೀಡಿ, 300,000 ರೂ.ದಂಡ ವಿಧಿಸಿತ್ತು.
ಧರ್ಮನಿಂದನೆ ಆರೋಪದಡಿಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕ್ರಿಶ್ಚಿಯನ್ ಮಹಿಳೆಗೆ ವಿಧಿಸಿದ್ದ ಮರಣದಂಡನೆ ರದ್ದುಪಡಿಸಿ ಬಿಡುಗಡೆ ಮಾಡಬೇಕೆಂದು ಪೋಪ್ ಬೆನೆಡಿಕ್ಟ್-16 ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದರು.