ಪಾಕಿಸ್ತಾನದ ನೆಲದಲ್ಲಿ ಅಲ್ ಖಾಯಿದಾ ಉಗ್ರಗಾಮಿಗಳಿಗೆ ತರಬೇತಿ ನೀಡಿ ಜರ್ಮನಿಯ ಸಂಸತ್ ಮೇಲೆ ಮುಂಬೈ ಮಾದರಿಯ ದಾಳಿ ನಡೆಸುವಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಚು ರೂಪಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಆ ನಿಟ್ಟಿನಲ್ಲಿ ಜರ್ಮನಿಯ ಐತಿಹಾಸಿಕ ಸಂಸತ್ ಭವನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಜರ್ಮನಿಯ ಸಂಸತ್ ಭವನದ ಮೇಲೆ ಮುಂಬೈ ಮಾದರಿಯ ದಾಳಿ ನಡೆಸಲು ಅಲ್ ಖಾಯಿದಾ ಉಗ್ರರಿಗೆ ದಾವೂದ್ ಸಾಥ್ ನೀಡಿರುವ ಬಗ್ಗೆ ಡೆರ್ ಸ್ಪೈಗೆಲ್ ನ್ಯೂಸ್ ಮ್ಯಾಗಜಿನ್ ವರದಿ ಪ್ರಕಟಿಸಿತ್ತು.
ಸಂಭಾವ್ಯ ದಾಳಿಯನ್ನು ತಡೆಯುವ ಸಲುವಾಗಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ದೇಶಾದ್ಯಂತ ಸಾವಿರಾರು ಪೊಲೀಸರನ್ನು ಭದ್ರತೆಯೆ ನಿಯೋಜಿಸಲಾಗಿದೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಭಾಗದಲ್ಲಿನ ಉಗ್ರರ ಶಿಬಿರದಲ್ಲಿ ಆರು ಮಂದಿ ಅಲ್ ಖಾಯಿದಾ ಉಗ್ರರು ತರಬೇತಿ ಪಡೆದಿದ್ದು, ಅವರೆಲ್ಲ ಜರ್ಮನಿಯ ಸಂಸತ್ ಭವನದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ವರದಿ ವಿವರಿಸಿತ್ತು. ಈಗಾಗಲೇ ಇಬ್ಬರು ಉಗ್ರರು ಬರ್ಲಿನ್‌ಗೆ ಆಗಮಿಸಿರುವುದಾಗಿಯೂ ವರದಿ ತಿಳಿಸಿತ್ತು.