ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾರತದ ಕೈವಾಡ ಇಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಸ್ಪಷ್ಟಪಡಿಸಿದ್ದು, ದೇಶದಲ್ಲಿನ ಭಯೋತ್ಪಾದನೆಗೆ ಸ್ಥಳೀಯರ ಬೆಂಬಲ ಇರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಭಾರತ ಸೇರಿದಂತೆ ಯಾವುದೇ ದೇಶದ ಮೇಲೆ ಗೂಬೆ ಕೂರಿಸುವ ಮೊದಲು ಅದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿರುವುದಾಗಿ ದಿ ನ್ಯೂಸ್ ವರದಿ ಮಾಡಿದೆ.
ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗೆ ಸ್ಥಳೀಯರ ನೆರವು ಇಲ್ಲದೆ ಅದು ಸಾಧ್ಯವಾಗಲಾರದು ಎಂದು ಅಭಿಪ್ರಾಯವ್ಯಕ್ತಪಡಿಸಿದ ಮಲಿಕ್, ಈ ನಿಟ್ಟಿನಲ್ಲಿ ನಾವು ಉಗ್ರರನ್ನು ಸದೆಬಡಿಯಲೇಬೇಕಾದ ಅಗತ್ಯ ಇದೆ ಎಂದು ತಿಳಿಸಿದರು.
ತೆಹ್ರೀಕ್ ಇ ತಾಲಿಬಾನ್, ಅಲ್ ಖಾಯಿದಾ ಮತ್ತು ಲಷ್ಕರ್ ಇ ಜಾಂಘ್ವಿ ಒಟ್ಟಾಗಿ ಪಾಕಿಸ್ತಾನದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಿ ದೇಶವನ್ನು ಅಸ್ಥಿರಗೊಳಿಸುವ ಕೆಲಸದಲ್ಲಿ ತೊಡಗಿರುವುದಾಗಿ ಆರೋಪಿಸಿದರು.