ನೊಬೆಲ್ ಪ್ರಶಸ್ತಿ ವಿಜೇತೆ, ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಅವರನ್ನು ಭೇಟಿ ಮಾಡಲು ಅವರ ಎರಡನೇ ಪುತ್ರನಿಗೆ ಮ್ಯಾನ್ಮಾರ್ ವೀಸಾ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದಷ್ಟೇ ತಾಯಿಯನ್ನು ಭೇಟಿಯಾಗಿದ್ದ ಎರಡನೇ ಪುತ್ರ, ಇದೀಗ ಏಳು ವರ್ಷಗಳ ನಂತರ ಜೈಲುವಾಸದಿಂದ ಬಿಡುಗಡೆಗೊಂಡ ಸೂಕಿಯನ್ನು ನೋಡಲು ಮ್ಯಾನ್ಮಾರ್ ಅವಕಾಶ ಮಾಡಿಕೊಟ್ಟಿದೆ.
ಸೂಕಿ ಅವರ ಪುತ್ರ ಕಿಮ್ ಎರಿಸ್ (33) ಬ್ಯಾಂಕಾಕ್‌ನಲ್ಲಿ ಇದ್ದು, ತಾಯಿಯ ಭೇಟಿಗಾಗಿ ಮ್ಯಾನ್ಮಾರ್ ರಾಯಭಾರ ಕಚೇರಿಗೆ ವೀಸಾ ನೀಡುವಂತೆ ಅರ್ಜಿ ಹಾಕಿದ್ದರು. ಆ ನಿಟ್ಟಿನಲ್ಲಿ ಕಿಮ್ ಅವರಿಗೆ ವೀಸಾ ನೀಡಲಾಗಿದೆ ಎಂದು ಮ್ಯಾನ್ಮಾರ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೂಕಿ ಪುತ್ರ ಕಿಮ್ ಅವರಿಗೆ ಮ್ಯಾನ್ಮಾರ್ ಸರಕಾರ ವೀಸಾ ನೀಡಿರುವುದನ್ನು ನ್ಯಾಷನಲ್ ಲೀಗ್ ಫಾರ್ ಡೆಮೋಕ್ರಸಿ ಪಕ್ಷದ ವಕ್ತಾರ ಥೈನ್ ಓಓ ಖಚಿತಪಡಿಸಿದ್ದಾರೆ. 65ರ ಹರೆಯದ ಸೂಕಿ ಅವರನ್ನು ನವೆಂಬರ್ 13ರಂದು ಮ್ಯಾನ್ಮಾರ್ ಬಂಧಮುಕ್ತಗೊಳಿಸಿತ್ತು.