ಫಾನೋಮ್ ಪೆನಾ, ಮಂಗಳವಾರ, 23 ನವೆಂಬರ್ 2010( 12:20 IST )
ಪವಿತ್ರ ಜಲ ಉತ್ಸವದ ಅಂತಿಮ ದಿನದಂದು ಭಕ್ತಾದಿಗಳ ನೂಕುನುಗ್ಗಲಿನಲ್ಲಿ ಸುಮಾರು 345 ಮಂದಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕಾಂಬೋಡಿಯಾದ ರಾಜಧಾನಿಯಲ್ಲಿ ಮಂಗಳವಾರ ನಡೆದಿದೆ.
ಪವಿತ್ರ ಜಲ ಉತ್ಸವದ ಸಂದರ್ಭದಲ್ಲಿ ಏಕಾಏಕಿ ನೂಕುನುಗ್ಗಲು, ಗೊಂದಲದಿಂದ ಉಂಟಾದ ಕಾಲ್ತುಳಿತಕ್ಕೆ ಸಿಲುಕಿ ಮುನ್ನೂರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
1970ರ ನಂತರ ದೇಶದಲ್ಲಿ ನಡೆದ ಅತೀ ದೊಡ್ಡ ದುರಂತ ಇದಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಇಲ್ಲಿನ ದ್ವೀಪ ಪ್ರದೇಶದ ನದಿಯಲ್ಲಿ ನಡೆದ ಈ ಉತ್ಸವಕ್ಕೆ ಜನರು ಸೇತುವೆ ಮೇಲೆ ಆಗಮಿಸುತ್ತಿದ್ದ ವೇಳೆ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಏಕಾಏಕಿ ಸಂಭವಿಸಿದ ಘಟನೆಯಿಂದ ಗಾಬರಿಗೊಂಡ ಜನರು ದಿಕ್ಕೆಟ್ಟು ಓಡಿದಾಗ ಕಾಲ್ತುಳಿತಕ್ಕೆ ಸಿಲುಕಿಯೇ ಈ ಸಾವು ಸಂಭವಿಸಿದೆ. ನದಿಯಲ್ಲಿ ಬಿದ್ದಿರುವ ಶವಗಳಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಕೆಲವು ಗಂಟೆಗಳ ನಂತರ ಸ್ಥಳಕ್ಕೆ ಆಂಬ್ಯುಲೆನ್ಸ್ ಆಗಮಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಮೂರು ದಶಕಗಳ ಹಿಂದೆ ಕೇಮರ್ ರೋಗ್ ಆಡಳಿತದಲ್ಲಿ 17 ಲಕ್ಷ ಜನರನ್ನು ಹತ್ಯೆಗೈಯಲಾಗಿತ್ತು. ಡಚ್ ಎಂದೇ ಹೆಸರಾದ ಕೈಯಿಂಗ್ ಗುಯೆಕ್ ಇವ್ ನಾಮ್‌ಪೆನ್‌ನ ಎಸ್-21 ಕಾರಾಗೃಹದ ಮುಖ್ಯಸ್ಥನಾಗಿದ್ದು, ಆತ 17 ಲಕ್ಷ ಜನರನ್ನು ಹೇಯವಾಗಿ ಹತ್ಯೆಗೈದಿದ್ದ. ಆ ಬಳಿಕ ದೇಶದಲ್ಲಿ ನಡೆದ ಅತೀ ದೊಡ್ಡ ದುರಂತ ಇದಾಗಿದೆ.
ಘಟನೆ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಹುನ್ ಸೆನ್ ಆದೇಶಿಸಿದ್ದಾರೆ. ಯಾವ ಕಾರಣದಿಂದ ಘಟನೆ ನಡೆಯಿತು ಎಂಬ ಬಗ್ಗೆ ವರದಿ ನೀಡುವಂತೆಯೂ ಸೂಚಿಸಿದ್ದಾರೆ. ಅಲ್ಲದೇ ಗುರುವಾರ ರಾಷ್ಟ್ರೀಯ ಶೋಕಾಚರಣೆ ಆಚರಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ 5 ಮಿಲಿಯನ್ (1,250 ಅಮೆರಿಕನ್ ಡಾಲರ್) ಪರಿಹಾರ ನೀಡುವುದಾಗಿಯೂ ಘೋಷಿಸಿದ್ದಾರೆ. ಗಾಯಗೊಂಡವರಿಗೆ 250 ಡಾಲರ್ ನೀಡುವುದಾಗಿ ಹೇಳಿದ್ದಾರೆ.