ನ್ಯಾಟೋ 'ಮಿಲಿಟರಿ ಮಾಫಿಯಾ' ಮೂಲಕ ಅಫ್ಘಾನಿಸ್ತಾನದಲ್ಲಿ ಜನಾಂಗೀಯ ಹತ್ಯೆ ನಡೆಸುತ್ತಿರುವುದಾಗಿ ವಾಗ್ದಾಳಿ ನಡೆಸಿರುವ ಕ್ಯೂಬಾ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ 'ಉತ್ತಮ ಹಾವಾಡಿಗ' ಪ್ರಶಸ್ತಿಗೆ ಅರ್ಹ ಎಂದು ಬಣ್ಣಿಸಿದ್ದಾರೆ.
ಪೋರ್ಚುಗಲ್‌ನಲ್ಲಿ ನಡೆದ ಪಾಶ್ಚಾತ್ಯ ಮೈತ್ರಿಕೂಟ ಶೃಂಗಸಭೆಯ ನಂತರ ಪ್ರತಿಕ್ರಿಯೆಯಾಗಿ ಲೇಖನ ಪ್ರಕಟಿಸಿರುವ ಕ್ಯಾಬೋ, ಬರಾಕ್ ಮತ್ತು ನ್ಯಾಟೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಟೋ ದುರಾಕ್ರಮಣದ ಸಂಸ್ಥೆಯಾಗಿದೆ, ನ್ಯಾಟೋ ಅಫ್ಘಾನಿಸ್ತಾನದಲ್ಲಿ ಲಕ್ಷಾಂತರ ಜನರು ಬಡತನ, ಉದ್ಯೋಗ, ಆಹಾರ, ಮನೆ, ಆರೋಗ್ಯ ಹಾಗೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆ ಬಗ್ಗೆ ನ್ಯಾಟೋ ಗಮನಹರಿಸದೆ, ಯುದ್ಧವನ್ನೇ ಪ್ರಮುಖ ದಾರಿ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
84ರ ಹರೆಯದ ಕಮ್ಯೂನಿಷ್ಟ್ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ 1959ರಲ್ಲಿ ಕ್ರಾಂತಿ ಮೂಲಕ ಕ್ಯೂಬಾದ ಅಧಿಕಾರದ ಗದ್ದುಗೆ ಏರಿದ್ದರು. ತೀವ್ರ ಅನಾರೋಗ್ಯದ ಕಾರಣದಿಂದ 2006ರಲ್ಲಿ ತಮ್ಮ ಅಧ್ಯಕ್ಷಗಾದಿಯನ್ನು ಸಹೋದರ ರೌಲ್ ಕ್ಯಾಸ್ಟ್ರೋಗೆ ಹಸ್ತಾಂತರಿಸಿದ್ದರು.
ಅಫ್ಘಾನಿಸ್ತಾನದಲ್ಲಿನ ಯುದ್ಧವನ್ನು ನಿಲ್ಲಿಸಿ ಅಭಿವೃದ್ಧಿಯತ್ತ ಗಮನಹರಿಸುವಲ್ಲಿ ಅಮೆರಿಕ ಕೂಡ ದೃಢ ನಿರ್ಧಾರ ತಳೆಯುವಲ್ಲಿ ಹಿಂದೇಟು ಹಾಕುತ್ತಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೂ ಬೆಲೆ ಕೊಡದೆ, ಜಾಗತಿಕ ಗಮನವನ್ನು ಮಾಧ್ಯಮಗಳ ಮೂಲಕ ಬೇರೆಡೆಗೆ ತಿರುಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಅಮೆರಿಕ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ಒಬಾಮ ಈಗಾಗಲೇ ಘೋಷಿಸಿದ್ದರು. ಆದರೆ ನೊಬೆಲ್ ಪ್ರಶಸ್ತಿ ಪಡೆದ ನಂತರ ಆ ಪ್ರಸ್ತಾಪವನ್ನು ಮುಂದಕ್ಕೆ ಹಾಕಿದ್ದಾರೆ. ಹಾಗಾಗಿ ನಾವು ಬರಾಕ್ ಒಬಾಮಗೆ ಉತ್ತಮ ಹಾವಾಡಿಗ ಪ್ರಶಸ್ತಿ ನೀಡುವುದಾಗಿ ಕ್ಯಾಸ್ಟ್ರೋ ವ್ಯಂಗ್ಯವಾಡಿದ್ದಾರೆ.