ಉಲ್ಟಾ ಹೊಡೆದ ಪಾಕ್;ಭುಟ್ಟೋ ಹತ್ಯೆ-ಮುಷ್ ತನಿಖೆಗೆ ನಿರ್ಧಾರ
ಇಸ್ಲಾಮಾಬಾದ್, ಮಂಗಳವಾರ, 23 ನವೆಂಬರ್ 2010( 15:11 IST )
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣದ ತನಿಖಾ ವರದಿಯಲ್ಲಿ ಪಾಕ್ ಇತ್ತೀಚೆಗಷ್ಟೇ ಮಿಲಿಟರಿ ಸರ್ವಾಧಿಕಾರಿ, ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರಿಗೆ ಕ್ಲಿನ್ ಚಿಟ್ ನೀಡಿತ್ತು. ಆದರೆ ಇದೀಗ ಭುಟ್ಟೋ ಹತ್ಯಾ ಪ್ರಕರಣದಲ್ಲಿ ಮುಷ್ ಅವರನ್ನು ತನಿಖೆಗೊಳಪಡಿಸಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ತಯಾರಿಸಿರುವ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಅದನ್ನು ಬ್ರಿಟನ್‌ನಲ್ಲಿರುವ ಮುಷರ್ರಫ್ ಅವರಿಗೆ ಕಳುಹಿಸುವ ಸಿದ್ದತೆ ಮಾಡಿಕೊಂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
1999ರಲ್ಲಿ ರಕ್ತರಹಿತ ಕ್ರಾಂತಿಯ ಮೂಲಕ ಪಾಕಿಸ್ತಾನದ ಅಧ್ಯಕ್ಷಗಾದಿ ಏರಿದ್ದ ಮುಷರ್ರಫ್, ನಂತರ ಒಂಬತ್ತು ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. 2008ರಲ್ಲಿ ಅಧ್ಯಕ್ಷಪಟ್ಟದಿಂದ ಮುಷ್ ಕೆಳಗಿಳಿದ್ದರು. ಪ್ರಸ್ತುತ ಮುಷ್ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಭುಟ್ಟೋ ಹತ್ಯಾ ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಪ್ರತಿಯೊಬ್ಬರ ಹೇಳಿಕೆಯನ್ನು ನಾವು ಪಡೆಯುತ್ತಿದ್ದು, ಆ ನಿಟ್ಟಿನಲ್ಲಿ ಮುಷರ್ರಫ್ ಅವರ ಹೇಳಿಕೆ ಪಡೆಯುವ ನಿಟ್ಟಿನಲ್ಲಿ ಪ್ರಶ್ನೆಯನ್ನು ತಯಾರಿಸಿ ಕಳುಹಿಸಲಾಗುವುದು ಎಂದು ಎಫ್ಐಎ ನಿರ್ದೇಶಕ ವಾಸಿಮ್ ಅಹ್ಮದ್ ತಿಳಿಸಿದ್ದಾರೆ.