ಇಸ್ಲಾಮಾಬಾದ್, ಮಂಗಳವಾರ, 23 ನವೆಂಬರ್ 2010( 20:11 IST )
'ಮೆಡಿಕಲ್ ರಿಲೀಫ್' ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿರುವುದಕ್ಕೆ ಆಕ್ರೋಶಗೊಂಡ ಆರೋಪಿ ತನ್ನ ಎರಡು ಶೂಗಳನ್ನು ನ್ಯಾಯಾಧೀಶರ ಮೇಲೆ ಎಸೆದ ಘಟನೆ ಪಾಕಿಸ್ತಾನದ ಮುಲ್ತಾನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಒಂದು ಶೂ ನ್ಯಾಯಾಧೀಶರ ಮುಖಕ್ಕೆ ಬಡಿದಿದ್ದು, ಮತ್ತೊಂದು ಎದೆಗೆ ತಗುಲಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಅರ್ಜಿ ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡ ಕೊಲೆ ಆರೋಪಿ ನಾಜಿರ್ ಹುಸೈನ್ ಮುಲ್ತಾನ್ ಜಿಲ್ಲಾ ನ್ಯಾಯಾಧೀಶರ ಮೇಲೆ ಶೂ ಎಸೆದು, ನಂತರ ಪೋಡಿಯಂ ಏರಿ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದ. ಹುಸೈನ್ ಮೆಡಿಕಲ್ ರಿಲೀಫ್ ಕೋರಿ ನ್ಯಾಯಾಧೀಶ ಮಿಯಾನ್ ಖ್ವಾಸಿಮ್ ಅವರಿಗೆ ಸೋಮವಾರ ಅರ್ಜಿ ಸಲ್ಲಿಸಿದ್ದ. ಅದನ್ನು ತಿರಸ್ಕರಿಸಿರುವುದು ಆತನ ಕೋಪಕ್ಕೆ ಕಾರಣವಾಗಿತ್ತು ಎಂದು ವರದಿ ಹೇಳಿದೆ.
ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಅದನ್ನು ತಿರಸ್ಕರಿಸಿ, ಹುಸೈನ್‌ಗೆ ಈಗಾಗಲೇ ಹಲವು ಬಾರಿ ಮೆಡಿಕಲ್ ರಿಲೀಫ್ ನೀಡಲಾಗಿದೆ. ಇದೀಗ ಮತ್ತೆ ಮೆಡಿಕಲ್ ರಿಲೀಫ್ ನೀಡಲು ಸಾಧ್ಯವಿಲ್ಲ ಎಂದು ಆರೋಪಿಗೆ ತಿಳಿಸಿದ್ದರು ಎಂದು ಎಕ್ಸ್‌ಪ್ರೆಸ್ ಟ್ರೈಬ್ಯೂನೆ ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಹುಸೈನ್ ಮತ್ತು ನ್ಯಾಯಾಧೀಶರ ನಡುವೆ ಸಾಕಷ್ಟು ವಾಗ್ವಾದ ನಡೆದಿತ್ತು. ನಂತರ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.