ಷಿಯಾ ಸಮುದಾಯದ ಮೆರವಣಿಗೆ ಸಾಗುತ್ತಿದ್ದ ವೇಳೆ ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ ಸುಮಾರು 15 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ಯೆಮೆನ್‌ನಲ್ಲಿ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಇಲ್ಲಿನ ಅಲ್ ಜಾವ್ಫ್ ಪ್ರಾಂತ್ಯದಲ್ಲಿ ಸಾಗುತ್ತಿದ್ದ ಷಿಯಾ ಮೆರವಣಿಗೆಯನ್ನು ಗುರಿಯಾಗಿರಿಸಿಕೊಂಡು ಕಾರ್ ಬಾಂಬ್ ಸ್ಫೋಟಿಸಿದ ಪರಿಣಾಮ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಬಂಡುಕೋರ ವಕ್ತಾರ ಮೊಹಮ್ಮದ್ ಅಬ್ದುಲ್‌ಸಲಾಂ ದೂರವಾಣಿ ಮೂಲಕ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಷಿಯಾ ಸಮುದಾಯ ಅಲ್ ಗಾದೇರ್‌ಗೆ ತಯಾರಿ ನಡೆಸುತ್ತಿದ್ದ ವೇಳೆಯಲ್ಲಿ ಅವರನ್ನು ಗುರಿಯಾಗಿರಿಸಿಕೊಂಡು ಸುನ್ನಿ ಬಂಡುಕೋರರು ಈ ದಾಳಿ ನಡೆಸಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಆದರೆ ಇದು ಆತ್ಮಾಹುತಿ ಬಾಂಬ್ ದಾಳಿ ಕೂಡ ಆಗಿರುವ ಸಾಧ್ಯತೆ ಇರುವುದಾಗಿ ಶಂಕಿಸಿದ್ದಾರೆ.