ಶಿವನ ಗೆಟಪ್‌ನಲ್ಲಿ ಬರಾಕ್ ಒಬಾಮ!; ಮಲೇಷ್ಯಾದಲ್ಲಿ ಪ್ರತಿಭಟನೆ
ಕೌಲಾಲಂಪುರ, ಬುಧವಾರ, 24 ನವೆಂಬರ್ 2010( 18:32 IST )
PR
ಕೌಲಾಲಂಪುರ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶಿವನಂತೆ ಬಿಂಬಿಸಿ ಮುಖಪುಟ ಮುದ್ರಿಸಿ ಸಂಚಿಕೆ ಬಿಡುಗಡೆ ಮಾಡಿರುವ ಅಮೆರಿಕ ಮೂಲದ ನ್ಯೂಸ್ ವೀಕ್ ಮ್ಯಾಗಜೀನ್‌ಗೆ ಸರಕಾರ ನಿಷೇಧ ಹೇರಬೇಕೆಂದು ಮಲೇಶ್ಯಾದ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಒಬಾಮ ಅವರನ್ನು ಶಿವನ ಭಂಗಿಯಲ್ಲಿ ಚಿತ್ರಿಸಿರುವುದು ಹಿಂದೂಗಳನ್ನು ಅವಮಾನಿಸಿದಂತೆ ಎಂದು ಮಲೇಶ್ಯನ್ ಹಿಂದೂ ಸಂಘಟನೆಯ ಉಪಾಧ್ಯಕ್ಷ ಪಿ.ಮುರುಗೈ ಆರೋಪಿಸಿದ್ದಾರೆ.
ಅಮೆರಿಕನ್ ಮೂಲದ ನ್ಯೂಸ್‌ವೀಕ್ ಬಿಡುಗಡೆ ಮಾಡಿರುವ ನವೆಂಬರ್ ತಿಂಗಳ ಸಂಚಿಕೆಯಲ್ಲಿ ಒಬಾಮ ಅವರನ್ನು 'ನಟರಾಜ'ನಂತೆ ಬಿಂಬಿಸಿ, ಗಾಡ್ ಆಫ್ ಆಲ್ ಥಿಂಗ್ಸ್ ಎಂಬ ಕ್ಯಾಪ್ಶನ್ ನೀಡಿದೆ.
ಮ್ಯಾಗಜಿನ್ ವಿರುದ್ಧ ನಮಗೆ ಈಗಾಗಲೇ ಹಲವು ದೂರುಗಳು ಬಂದಿರುವುದಾಗಿ ಮುರುಗೈ ತಿಳಿಸಿದ್ದಾರೆ. ಧಾರ್ಮಿಕತೆಯ ಮಹತ್ವ ತಿಳಿಯದೆ ಈ ರೀತಿ ಒಬ್ಬರನ್ನು ದೇವರಿಗೆ ಹೋಲಿಸಿ ಚಿತ್ರ ಪ್ರಕಟಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಮ್ಯಾಗಜಿನ್‌ನಲ್ಲಿ ಒಬಾಮ ಅವರನ್ನು ನಟರಾಜನಂತೆ ಚಿತ್ರಿಸಿರುವುದಕ್ಕೆ ಪ್ರಕಾಶಕರು ಜಗತ್ತಿನ ಎಲ್ಲ ಹಿಂದೂಗಳ ಕ್ಷಮೆ ಕೇಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಮಲೇಶ್ಯಾದಲ್ಲಿ ವಿವಿಧ ಜನಾಂಗದವರು ವಾಸಿಸುತ್ತಿದ್ದು, ಇದರಲ್ಲಿ ಶೇ.2.1ರಷ್ಟು ಭಾರತೀಯರಿದ್ದಾರೆ. ಅವರಲ್ಲಿ ಬಹುತೇಕರು ತಮಿಳರು. ದೇಶದ ಶೇ.28 ಜನಸಂಖ್ಯೆಯಲ್ಲಿ ಅವರು ಶೇ.8ರಷ್ಟಿದ್ದಾರೆ ಎಂದು ವರದಿ ತಿಳಿಸಿದೆ.