ಪಾಕಿಸ್ತಾನದ ಐಎಸ್ಐ ವರಿಷ್ಠ ಅಹ್ಮದ್ ಶುಜಾ ಪಾಶಾ ಹಾಗೂ ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಇ ತೊಯ್ಬಾದ ಮುಖಂಡ ಹಫೀಜ್ ಸಯೀದ್, ಜಾಕಿ ಉರ್ ರಹಮಾನ್ ಲಖ್ವಿಗೆ ಅಮೆರಿಕ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದ ಅಮೆರಿಕದ ಕುಟುಂಬದ ಇಬ್ಬರು ಸಲ್ಲಿಸಿದ ಮೊಕದ್ದಮೆ ವಿಚಾರಣೆಯ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿ ಮಾಡಿದ್ದಾರೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ನವೆಂಬರ್ 19ರಂದು ಐಎಸ್ಐ, ಲಖ್ವಿ, ಸಯೀದ್ ವಿರುದ್ಧ 26 ಪುಟಗಳ ಮೊಕದ್ದಮೆ ನ್ಯೂಯಾರ್ಕ್ ಕೋರ್ಟ್‌ನಲ್ಲಿ ದಾಖಲಿಸಲಾಗಿದೆ. ಮುಂಬೈ ದಾಳಿಯಲ್ಲಿ ಛಾಬಾದ್ ಹೌಸ್‌ನಲ್ಲಿ ರಾಬ್ಬಿ ಗಾರ್ವಿಯೆಲ್ ನೋಹಾ ಮತ್ತು ಪತ್ನಿ ರಿವ್ಕಾ ಉಗ್ರರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದು, ಅವರ ಸಂಬಂಧಿಗಳು ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಘಟನೆಯ ಸಂದರ್ಭದಲ್ಲಿ ದಂಪತಿಗಳ ಪುತ್ರ ಮೋಶೆ ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಮೊಕದ್ದಮೆಯ ವಿಚಾರಣೆ ನಡೆಸಿದ ಬ್ರೂಕ್ಲೈನ್ ಕೋರ್ಟ್, ಐಎಸ್ಐನ ಮೇಜರ್ ಸಮೀರ್ ಅಲಿ, ಅಜಾಮ್ ಚೀಮಾ, ಮೇಜರ್ ಇಕ್ಬಾಲ್, ಲಖ್ವಿ, ಸಾಜಿದ್ ಮಜಿದ್, ಪಾಶಾ, ಸಯೀದ್ ಹಾಗೂ ನಾಡೇಮ್ ತಾಜ್‌ಗೆ ಸಮನ್ಸ್ ಜಾರಿ ಮಾಡಿದೆ.