ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11-ಐಎಸ್ಐ ಲಿಂಕ್ ಶುದ್ಧ ಅಸಂಬದ್ಧ: ಪಾಕ್ ತಿಪ್ಪರಲಾಗ (ISI | Pakistan | 26/11 attacks | preposterous | Abdul Basit | US court)
ಇಸ್ಲಾಮಾಬಾದ್, ಶುಕ್ರವಾರ, 26 ನವೆಂಬರ್ 2010( 13:00 IST )
ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಐಎಸ್ಐ ಲಿಂಕ್ ಇದೆ ಎಂದು ಹೇಳುವುದು ಶುದ್ಧ ಅಸಂಬದ್ಧವಾದದ್ದು ಎಂದು ಪಾಕಿಸ್ತಾನ ಅಮೆರಿಕಕ್ಕೆ ತಿರುಗೇಟು ನೀಡಿದೆ.
2008ರ ಮುಂಬೈ ಭಯೋತ್ಪಾದನಾ ದಾಳಿ ಕುರಿತಂತೆ ಅಮೆರಿಕ ಕೋರ್ಟ್‌ನಲ್ಲಿ ದಾಖಲಾದ ಅರ್ಜಿಯ ವಿಚಾರಣೆಯಲ್ಲಿ ಐಎಸ್ಐ ಏಜೆನ್ಸಿಯ ಮುಖ್ಯಸ್ಥ, ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.
ಭಾರತದ ವಾಣಿಜ್ಯ ನಗರಿಯಾದ ಮುಂಬೈ ಮೇಲೆ ಲಷ್ಕರ್ ಇ ತೊಯ್ಬಾದ ಹತ್ತು ಮಂದಿ ಉಗ್ರರು ನಡೆಸಿದ ದಾಳಿಗೆ ಶುಕ್ರವಾರ ಎರಡನೇ ವರ್ಷಾಚರಣೆ. ಹಾಗಾಗಿ ಮುಂಬೈ ದಾಳಿಕೋರರನ್ನು ಬಂಧಿಸಿ ಸೂಕ್ತ ನ್ಯಾಯ ಒದಗಿಸಿಕೊಡುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿಟ್ ತಿಳಿಸಿದ್ದಾರೆ.
ದಾಳಿ ಕುರಿತಂತೆ ಈಗಾಗಲೇ ಏಳು ಮಂದಿಯ ವಿಚಾರಣೆ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಹಾಗಾಗಿ ನಾವುಪ ಮುಂಬೈ ದಾಳಿಕೋರರನ್ನು ಶಿಕ್ಷಿಸಿ ನ್ಯಾಯ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಆದರೆ ಈ ವಿಚಾರದಲ್ಲಿ ಐಎಸ್ಐಯನ್ನು ಎಳೆದು ತರುತ್ತಿರುವುದು ಮಾತ್ರ ಶುದ್ಧ ಅವಿವೇಕತನದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಎಸ್ಐನ ಮುಖ್ಯಸ್ಥ ಲೆ.ಜನರಲ್ ಅಹ್ಮದ್ ಶುಜಾ ಪಾಶಾ, ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, ಜಾಕಿರ್ ಉರ್ ರೆಹಮಾನ್ ಸೇರಿದಂತೆ ಹಲವರಿಗೆ ಅಮೆರಿಕದ ಕೋರ್ಟ್ ಸಮನ್ಸ್ ಜಾರಿ ಮಾಡಿದೆಯಲ್ಲ ಎಂಬ ಪ್ರಶ್ನೆಗೆ ಬಾಸಿಟ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.