ಬ್ರುಸೆಲ್ಸ್, ಶುಕ್ರವಾರ, 26 ನವೆಂಬರ್ 2010( 13:21 IST )
ಚೀನಾ, ಭಾರತ ಹಾಗೂ ರಷ್ಯಾ ಮ್ಯಾನ್ಮಾರ್ ಆಡಳಿತರೂಢ ಮಿಲಿಟರಿ ಜುಂಟಾ ಸರಕಾರ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕೆಂದು ಯುರೋಪಿಯನ್ ಒಕ್ಕೂಟ ಸಂಸತ್ ಒತ್ತಾಯಿಸಿದ್ದು, ಆ ನಿಟ್ಟಿನಲ್ಲಿ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಮಾಡಲು ಒತ್ತಡ ಹೇರಬೇಕೆಂದು ಆಗ್ರಹಿಸಿದೆ.
ಮ್ಯಾನ್ಮಾರ್ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ, ವಿರೋಧ ಪಕ್ಷದ ವರಿಷ್ಠೆ ಆಂಗ್ ಸಾನ್ ಸೂಕಿ ಅವರನ್ನು ಬಿಡುಗಡೆ ಮಾಡಿರುವುದನ್ನು ಸ್ವಾಗತಿಸುವ ನಿರ್ಣಯವನ್ನು ಸಂಸತ್‌ನಲ್ಲಿ ಕೈಗೊಂಡಿತ್ತು. ಆದರೆ ಇತ್ತೀಚೆಗಷ್ಟೇ ಬಂಧಮುಕ್ತವಾಗಿರುವ ಸೂಕಿ ಅವರ ರಕ್ಷಣೆ ಕುರಿತು ಕಳವಳ ವ್ಯಕ್ತಪಡಿಸಿರುವುದಾಗಿ ಇಯು ಏಷ್ಯಾ ನ್ಯೂಸ್ ವರದಿ ಮಾಡಿದೆ.
ಸುಮಾರು 18 ತಿಂಗಳ ಕಾಲ ಗೃಹಬಂಧನದಲ್ಲಿದ್ದ ಸೂ ಕಿಯನ್ನು ನವೆಂಬರ್ 13ರಂದು ಮ್ಯಾನ್ಮಾರ್ ಸರಕಾರ ಬಿಡುಗಡೆ ಮಾಡಿತ್ತು. ಮ್ಯಾನ್ಮಾರ್‌ನಲ್ಲಿ ಆರ್ಥಿಕ ಮತ್ತು ರಾಜಕೀಯ ಪ್ರಭಾವ ಬಳಸಿ ಮತ್ತೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಬೇಕಾಗಿದೆ ಎಂದು ಸಂಸತ್‌ನಲ್ಲಿ ಕೈಗೊಂಡಿರುವ ನಿರ್ಣಯದಲ್ಲಿ ತಿಳಿಸಿದೆ.