ಮುಸ್ಲಿಮ್ ಯುವತಿ ಜತೆ ವಿವಾಹ; ಭೀತಿಯಲ್ಲಿ ಕ್ರಿಶ್ಚಿಯನ್ ಕುಟುಂಬ
ಕರಾಚಿ, ಶನಿವಾರ, 27 ನವೆಂಬರ್ 2010( 13:19 IST )
ಕ್ರಿಶ್ಚಿಯನ್ ಯುವಕನೊಬ್ಬ ಮುಸ್ಲಿಮ್ ಯುವತಿ ಜತೆ ಓಡಿಹೋದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಉದ್ವಿಗ್ನ ಸ್ಥಿತಿಗೆ ಹೆದರಿರುವ ಹಲವಾರು ಕ್ರಿಶ್ಚಿಯನ್ ಕುಟುಂಬ ಸುರಕ್ಷತೆಯ ದೃಷ್ಟಿಯಲ್ಲಿ ಬೇರೆಡೆಗೆ ವಲಸೆ ಹೋಗುತ್ತಿರುವ ಘಟನೆ ಕರಾಚಿಯಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಕಳೆದ ವಾರ 20ರ ಹರೆಯದ ಕ್ರಿಶ್ಚಿಯನ್ ಯುವಕನೊಬ್ಬ 18ರ ಹರೆಯದ ಮುಸ್ಲಿಮ್ ಪ್ರಿಯತಮೆಯೊಡನೆ ಓಡಿಹೋದ ನಂತರ ಕರಾಚಿಯ ಸಯೀದಾಬಾದ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಕಂಡುಬಂದಿರುವುದಾಗಿ ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಯುವಕ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ನಂತರ ಯುವತಿ ಜತೆ ಫೈಸಲಾಬಾದ್‌ನಲ್ಲಿ ಮದುವೆಯಾಗಿರುವುದಾಗಿ ವರದಿ ವಿವರಿಸಿದೆ. ಇದರಿಂದ ಅಸಮಾಧಾನಗೊಂಡಿರುವ ಯುವತಿಯ ಕುಟುಂಬದವರು ಮತ್ತು ರಾಜಕೀಯ ಪಕ್ಷದ ಕಾರ್ಯಕರ್ತರು, ಯುವತಿ ಮನೆಗೆ ವಾಪಸ್ ಬಾರದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಅಷ್ಟೇ ಅಲ್ಲ ಯುವತಿಯ ಕುಟುಂಬದವರು ಸ್ಥಳೀಯ ಪ್ರದೇಶದಲ್ಲಿರುವ ಚರ್ಚ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಶಾಲೆಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ಘಟನಾ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಇನ್ನೂ ಮುಂದುವರಿದಿರುವುದಾಗಿ ವರದಿ ಹೇಳಿದೆ.
ಘಟನೆ ನಂತರ ಕ್ರಿಶ್ಚಿಯನ್ ಸಮುದಾಯದ ಮೇಲೆ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಕುಟುಂಬಗಳು ಬೇರೆಡೆಗೆ ಪಲಾಯನ ಮಾಡಿರುವುದಾಗಿ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.