ತಮ್ಮ ಗೆಳೆಯರು ಮತ್ತು ಕುಟುಂಬ ಸದಸ್ಯರ ಜತೆ ಬಾಸ್ಕೆಟ್ ಬಾಲ್ ಆಡುತ್ತಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ತುಟಿಗಳಿಗೆ ಗಾಯವಾಗಿದ್ದು, 12 ಹೊಲಿಗೆ ಹಾಕಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಬಾಸ್ಕೆಟ್ ಬಾಲ್ ಆಡುತ್ತಿದ್ದ ಸಮಯದಲ್ಲಿ ಎದುರಾಳಿಯ ಮುಂಗೈ ಒಬಾಮ ಅವರ ತುಟಿಗಳಿಗೆ ಆಕಸ್ಮಿಕವಾಗಿ ಹೊಡೆದ ಪರಿಣಾಮ ಗಾಯವಾಗಿರುವುದಾಗಿ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ರೋಬರ್ಟ್ ಗಿಬ್ಸ್ ತಿಳಿಸಿದ್ದಾರೆ. ಗಾಯಗೊಂಡ ಒಬಾಮ ಅವರನ್ನು ಶ್ವೇತಭವನದ ಮೆಡಿಕಲ್ ಯೂನಿಟ್‌ನಲ್ಲಿ ಚಿಕಿತ್ಸೆ ನೀಡಿ, 12 ಸ್ಟಿಚ್ಸ್ ಹಾಕಲಾಯಿತು ಎಂದು ವಿವರಿಸಿದ್ದಾರೆ.
ಶ್ವೇತಭವನದ ನೆಲಮಹಡಿಯಲ್ಲಿರುವ ಮೆಡಿಕಲ್ ಯೂನಿಟ್‌ನಲ್ಲಿ ಒಬಾಮ ಅವರನ್ನು ದಾಖಲಿಸಿ ಸಾಧಾರಣ ಅರಿವಳಿಕೆ ನೀಡಿ ಗಾಯಗೊಂಡ ತುಟಿಗಳಿಗೆ ಹೊಲಿಗೆ ಹಾಕಲಾಯಿತು. ಇದೇನು ತುಂಬಾ ಗಂಭೀರವಾದ ಹೊಡೆತವಾಗಿರಲಿಲ್ಲ, ಆದರೂ ತುಟಿಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಒಡೆದು ಹೋಗಿತ್ತು ಎಂದು ವೈದ್ಯರು ತಿಳಿಸಿರುವುದಾಗಿ ಗಿಬ್ಸ್ ಹೇಳಿದ್ದಾರೆ.