ಪೊಲೀಸ್ ಸಮವಸ್ತ್ರ ಧರಿಸಿದ್ದ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಅಫ್ಘಾನ್ ಪೊಲೀಸ್ ಕೇಂದ್ರಕ್ಕೆ ಏಕಾಏಕಿ ಒಳನುಗ್ಗಿ ತಮ್ಮನ್ನು ತಾವೇ ಸ್ಫೋಟಿಸಿಕೊಂಡ ಪರಿಣಾಮ ಸುಮಾರು 12 ಅಧಿಕಾರಿಗಳು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ಕಾಬೂಲ್‌ನ ಪಾಕ್‌ಟಿಕಾ ಪ್ರಾಂತ್ಯದಲ್ಲಿನ ಪೊಲೀಸ್ ಠಾಣೆಯ ಮೇಲೆ ಈ ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿರುವುದಾಗಿ ದಕ್ಷಿಣ ಅಫ್ಘಾನಿಸ್ತಾನ ಪೊಲೀಸ್ ಕಮಾಂಡರ್ ವಕ್ತಾರ ಜನರಲ್ ಡೌಡ್ ಅನ್‌ಡಾರಾಬಿ ತಿಳಿಸಿದ್ದಾರೆ.
ಇಬ್ಬರೂ ಪೊಲೀಸ್ ಸಮವಸ್ತ್ರದ ಧರಿಸಿ ಮೂರು ಭದ್ರತಾ ಪಡೆ ಗೇಟ್ ದಾಟಿ ಕಂಪೌಂಡ್ ಒಳನುಗ್ಗಿದ್ದರು. ಒರ್ವ ಉಗ್ರ ಸ್ಫೋಟಕವನ್ನು ಪೊಲೀಸ್ ಠಾಣೆಯ ಒಳಗೆ ಎಸೆದರೆ, ಮತ್ತೊಬ್ಬ ಸಮೀಪದ ಗೇಟ್ ಬಳಿ ತನ್ನನ್ನು ತಾನೇ ಸ್ಫೋಟಿಸಿಕೊಂಡ ಪರಿಣಾಮ ಪೊಲೀಸ್ ಅಧಿಕಾರಿಗಳ ದೇಹ ಛಿದ್ರ, ಛಿದ್ರವಾಗಿ ಬಿದ್ದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ.
ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಸ್ಫೋಟ ನಡೆದ ಸ್ಥಳದ ಸುತ್ತಲೂ ರಕ್ತದ ಕೋಡಿ ಹರಿದಿರುವುದಾಗಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.