ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ದಾಳಿ ಮುಂದುವರಿದಿದ್ದು, ಕೆಲಸ ನಿರ್ವಹಿಸಿ ಮನೆಗೆ ವಾಪಸಾಗುತ್ತಿದ್ದ 31ರ ಹರೆಯದ ವಿದ್ಯಾರ್ಥಿಯೊಬ್ಬನ ಹೊಟ್ಟೆಗೆ ಚೂರಿ ಹಾಕಿರುವ ಘಟನೆ ಇಲ್ಲಿನ ದಕ್ಷಿಣ ಯಾರ್ರಾ ಎಂಬಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಶಸ್ತ್ರಕ್ರಿಯೆ ನಡೆಸಿ 26 ಹೊಲಿಗೆ ಹಾಕಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ವಿದ್ಯಾರ್ಥಿಯ ಮೇಲೆ ನವೆಂಬರ್ 5ರಂದು ದಾಳಿ ನಡೆದಿತ್ತು.
ರೈಲ್ವೆ ಸ್ಟೇಷನ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಆಗಮಿಸಿ, ಆತನಲ್ಲಿ ಹಣ ಕೇಳಿದಾಗ ಆತ ಕೊಡಲು ನಿರಾಕರಿಸಿದ್ದ. ಇದರಿಂದ ಆಕ್ರೋಶಗೊಂಡ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಓರ್ವ ಹೊಟ್ಟೆಗೆ ಚೂರಿಯಿಂದ ಹಲವು ಬಾರಿ ಇರಿದಿದ್ದರೆ, ಮತ್ತೊರ್ವ ಹಿಗ್ಗಾಮುಗ್ಗಾ ಥಳಿಸಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ವಿದ್ಯಾರ್ಥಿ ಪೊಲೀಸರಿಗೆ ತಿಳಿಸಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಕೂಡಲೇ ಅಲ್ಫ್ರೈಡ್ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.