ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ತನಿಖಾಧಿಕಾರಿಗಳು ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರಿಗೆ ಕಳುಹಿಸಿಕೊಟ್ಟ ಪ್ರಶ್ನಾವಳಿ ಪತ್ರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಭುಟ್ಟೋ ಹತ್ಯಾ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮಾಜಿ ಸರ್ವಾಧಿಕಾರಿ ಲಂಡನ್‌ನಲ್ಲಿ ವಾಸ್ತವ್ಯ ಹೂಡಿರುವ ಮುಷ್ ಅವರಿಗೂ ಪ್ರಶ್ನಾವಳಿಯನ್ನು ಕಳೆದ ವಾರ ವಿಶೇಷ ಮೇಲ್ ಮೂಲಕ ಕಳುಹಿಸಿಕೊಟ್ಟಿತ್ತು. ಆದರೆ ಮುಷ್ ಅದನ್ನು ಸ್ವೀಕರಿಸಲು ನಿರಾಕರಿಸಿರುವುದಾಗಿ ಆಂತರಿಕ ಸಚಿವಾಲಯ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬೆನಜೀರ್ ಭುಟ್ಟ ಕೊಲೆ ಪ್ರಕರಣ ಕುರಿತಂತೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾದ ಎಲ್ಲಾ ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದು, ಆ ನಿಟ್ಟಿನಲ್ಲಿ ಮುಷ್ ಅವರ ಹೇಳಿಕೆ ಪಡೆಯಲು ನಿರ್ಧರಿಸಲಾಗಿತ್ತು ಎಂದು ಆಂತರಿಕ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.
ಮುಷರ್ರಫ್ ಪ್ರಶ್ನಾವಳಿಗೆ ಉತ್ತರಿಸಲು ನಿರಾಕರಿಸಿರುವುದರಿಂದ ಎಫ್ಐಎ ಮತ್ತೆ ಮುಷರ್ರಫ್ ಅವರಿಗೆ ನೂತನ ಪ್ರಶ್ನಾವಳಿಯನ್ನು ಲಂಡನ್ ನಿವಾಸಕ್ಕೆ ಕಳುಹಿಸಲು ಸಿದ್ದತೆ ನಡೆಸಿದೆ ಎಂದು ಅವರು ಹೇಳಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರ ಹೇಳಿಕೆಯೂ ನಮಗೆ ಅಗತ್ಯವಾಗಿದೆ. ಹಾಗಾಗಿ ಮುಷ್ ಅವರ ಹೇಳಿಕೆ ಕೂಡ ಬೇಕು ಎಂದು ಎಫ್ಐಎ ವರಿಷ್ಠ ವಾಸೀಮ್ ಅಹ್ಮದ್ ತಿಳಿಸಿದ್ದಾರೆ.