ಬಾಂಗ್ಲಾದೇಶ ಸರಕಾರದ ಮನೆಯಲ್ಲಿ ಠಿಕಾಣಿ ಹೂಡಿದ್ದು, ಅಲ್ಲಿಂದ ಬೇರೆಡೆ ಸ್ಥಳಾಂತರಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಮಾಜಿ ಪ್ರಧಾನಿ ಖಾಲೀದಾ ಜಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ್ದು, ಇದರಿಂದಾಗಿ ಜಿಯಾ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಢಾಕಾ ಕಂಟೋನ್ಮೆಂಟ್ ನಿವಾಸದಲ್ಲಿ ವಾಸವಾಗಿರುವ ಜಿಯಾ ಅವರು ಕೂಡಲೇ ಆ ಮನೆಯನ್ನು ತೆರವುಗೊಳಿಸಬೇಕೆಂದು ಕೇಳಿ ಬಾಂಗ್ಲಾ ಸರಕಾರ ನೋಟಿಸ್ ಜಾರಿ ಮಾಡಿತ್ತು. ಈ ಜಟಾಪಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಕೂಡ ಸರಕಾರದ ನಿಲುವು ಸರಿಯಾದದ್ದು ಎಂದೇ ತೀರ್ಪು ನೀಡಿತ್ತು.
ಆದರೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಜಿಯಾ ಮೇಲ್ಮನವಿಯನ್ನು ಅಪೆಕ್ಸ್ ಕೋರ್ಟ್ ವಜಾಗೊಳಿಸಿದೆ. 1972ರಿಂದ ಜಿಯಾ ಸರಕಾರಿ ಕಂಟೋನ್ಮೆಂಟ್ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದರು.
ಮುಖ್ಯ ನ್ಯಾಯಾಧೀಶ ಎಬಿಎಂ ಖೈರುಲ್ ಹಕ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಜಿಯಾ ಮೇಲ್ಮನವಿಯನ್ನು ವಜಾಗೊಳಿಸಿದೆ. ಅಲ್ಲದೇ ಮಾಜಿ ಪ್ರಧಾನಿ ಅವರ ನಿಲುವು ಸರಿಯಲ್ಲ ಎಂಬುದಾಗಿಯೂ ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ತೀರ್ಪಿನಿಂದಾಗಿ ಬಾಂಗ್ಲಾದಲ್ಲಿ ಜಿಯಾ ನೇತೃತ್ವದ ಪ್ರಮುಖ ವಿರೋಧ ಪಕ್ಷಕ್ಕೆ ಮುಖಭಂಗವಾಗಿದೆ.