ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಸಂಭವಿಸಿದ 37 ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸುಮಾರು 640 ಮಂದಿ ಸಾವನ್ನಪ್ಪಿದ್ದು, 1800 ಜನರು ಗಾಯಗೊಂಡಿದ್ದಾರೆ ಎಂದು ಸರಕಾರದ ಅಧಿಕೃತ ವರದಿ ತಿಳಿಸಿದೆ.
ಈ ವರದಿಯನ್ನು ಫೆಡರಲ್ ಇನ್ವೆಸ್ಟಿಗೇಷನ್‌ನ ಭಯೋತ್ಪಾದನ ನಿಗ್ರಹ ದಳ ಸಿದ್ದಪಡಿಸಿದ್ದು, ದೇಶಾದ್ಯಂತ ನಡೆದಿರುವ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಭದ್ರತಾ ಪಡೆಗಳು, ಸಾರ್ವಜನಿಕ ಆಸ್ತಿ, ಮಸೀದಿ, ವಿದೇಶಿಯರು, ಶಿಕ್ಷಣ ಸಂಸ್ಥೆ, ರಾಜಕೀಯ ಮುಖಂಡರು ಹಾಗೂ ಸರಕಾರಿ ಕಚೇರಿಗಳನ್ನು ಗುರಿಯಾಗಿರಿಸಲಾಗಿತ್ತು ಎಂದು ವಿವರಿಸಿದೆ.
37 ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸುಮಾರು 25 ಖೈಬೆರ್ ಪಾಖ್ತುಕುವಾ ಪ್ರದೇಶದಲ್ಲಿ ಸಂಭವಿಸಿದೆ. ಪಂಜಾಬ್ ಪ್ರಾಂತ್ಯದಲ್ಲಿ ಏಳು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂದು, ಬಲೂಚಿಸ್ತಾನದಲ್ಲಿ ಒಂದು ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಒಂದು ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಡಾನ್ ಪತ್ರಿಕೆ ಹೇಳಿದೆ.
ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ನಾಗರಿಕರೇ ಸೇರಿದ್ದಾರೆ. ಆದರೆ ದೇಶದಲ್ಲಿ ನಡೆಯುತ್ತಿರುವ ಆತ್ಮಹತ್ಯಾ ಬಾಂಬರ್ ದಾಳಿಯ ಸಂಖ್ಯೆ ಕಡಿಮೆಯಾಗಿರುವುದಾಗಿಯೂ ವರದಿ ತಿಳಿಸಿದೆ.