ಭಾರತದ ವಾಣಿಜ್ಯ ನಗರಿ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಭದ್ರತಾ ಏಜೆನ್ಸಿ ಮತ್ತೆ 20 ಮಂದಿ ಶಂಕಿತರನ್ನು ಗುರುತಿಸಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.
2008ರ ನವೆಂಬರ್‌ನಲ್ಲಿ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸುಮಾರು 166 ಜನರು ಬಲಿಯಾಗಿದ್ದರು. ಮುಂಬೈ ದಾಳಿಗೆ ಪಾಕ್ ನೆಲದಲ್ಲಿಯೇ ಸಂಚು ರೂಪಿಸಲಾಗಿತ್ತು. ಈ ಸಂಬಂಧ ದಾಳಿಯ ಹೊಣೆ ಹೊತ್ತಿರುವ ಲಷ್ಕರ್ ಇ ತೊಯ್ಬಾ ಸೇರಿದಂತೆ ಏಳು ಮಂದಿ ಉಗ್ರರ ವಿಚಾರಣೆ ಪಾಕಿಸ್ತಾನದಲ್ಲಿ ನಡೆಯುತ್ತಿದೆ.
ಆದರೆ ಮುಂಬೈ ಭಯೋತ್ಪಾದನಾ ದಾಳಿ ಕುರಿತಂತೆ ಪಾಕಿಸ್ತಾನ ನಡೆಸುತ್ತಿರುವ ತನಿಖೆ ಸಮಾಧಾನ ತಂದಿಲ್ಲ ಎಂದು ಭಾರತ ತಿಳಿಸಿತ್ತು. ಅಷ್ಟೇ ಅಲ್ಲ ದಾಳಿಯಲ್ಲಿ ಶಾಮೀಲಾಗಿರುವ ಲಷ್ಕರ್ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸೇರಿದಂತೆ ಇನ್ನೂ ಹಲವರ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿತ್ತು.
ಆ ನಿಟ್ಟಿನಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ದಳ ದಾಳಿಯಲ್ಲಿ ಶಾಮೀಲಾಗಿರುವ ಇನ್ನೂ 20 ಮಂದಿ ಶಂಕಿತರನ್ನು ಪತ್ತೆ ಹಚ್ಚಿದ್ದು, ಅವರೆಲ್ಲ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವರು ಇರಬೇಕೆಂದು ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನೆ ಆನ್‌ಲೈನ್ ಎಡಿಷನ್ ವರದಿ ವಿವರಿಸಿದೆ.