ಈಜುಡುಗೆ ಧರಿಸುವ ಮಹಿಳೆಗೆ ಶಿಕ್ಷೆ ವಿಧಿಸ್ಬೇಕು: ಕುವೈಟ್ ಎಂಪಿ
ಕುವೈಟ್, ಮಂಗಳವಾರ, 30 ನವೆಂಬರ್ 2010( 12:59 IST )
ಬೀಚ್‌ಗಳಲ್ಲಿ ಈಜು ಉಡುಗೆ ಧರಿಸುವ ಮಹಿಳೆಯರಿಗೆ ಒಂದು ವರ್ಷ ಕಾಲ ಜೈಲುಶಿಕ್ಷೆ ಹಾಗೂ 3,500 ಅಮೆರಿಕನ್ ಡಾಲರ್‌ನಷ್ಟು ದಂಡ ವಿಧಿಸಬೇಕೆಂದು ಕುವೈಟ್‌ನ ಐವರು ಇಸ್ಲಾಮಿಸ್ಟ್ ಸಂಸದರು ಹೊಸ ಪ್ರಸ್ತಾಪವೊಂದನ್ನು ಸಂಸತ್ ಮುಂದಿಟ್ಟಿದ್ದಾರೆ.
ಈ ಸಂಸದರು ವಿವಿಧ ಇಸ್ಲಾಮಿಸ್ಟ್ ಸಂಘಟನೆಯ ಸದಸ್ಯರಾಗಿದ್ದಾರೆ. ತಾವು ಸಲ್ಲಿಸಿರುವ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಕುವೈಟ್ ಪೀನಲ್ ಕೋರ್ಟ್‌ಗೆ ತಿದ್ದುಪಡಿ ತಂದು, ಬೀಚ್‌ಗಳಲ್ಲಿ ಮಹಿಳೆಯರು ಅಸಭ್ಯವಾಗಿ ವರ್ತಿಸುವುದಕ್ಕೆ ಕಡಿವಾಣ ಹಾಕಬೇಕೆಂದು ಸಂಸದರು ಮನವಿ ಮಾಡಿಕೊಂಡಿದ್ದಾರೆ.
ಸಂಸದರು ಸಂಸತ್‌ನಲ್ಲಿ ಮುಂದಿಟ್ಟ ಪ್ರಸ್ತಾಪದ ಪ್ರತಿ ನ್ಯೂಸ್ ಏಜೆನ್ಸಿವೊಂದಕ್ಕೆ ದೊರೆತಿದೆ. ಬೀಚ್‌ಗಳಲ್ಲಿ, ದ್ವೀಪ ಪ್ರದೇಶ ಹಾಗೂ ಈಜುಕೊಳದಲ್ಲಿ ಮಹಿಳೆ ಈಜುಡುಗೆ ಧರಿಸುವುದಕ್ಕೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಖಾಸಗಿ ಬೀಚ್, ಹೋಟೆಲ್ ಮತ್ತು ರೆಸಾರ್ಟ್‌ಗಳ ಈಜುಕೊಳ ಈ ಕಾನೂನಿನ ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬ ಬಗ್ಗೆ ಈ ಪ್ರಸ್ತಾಪದಲ್ಲಿ ಸ್ಪಷ್ಟವಾಗಿಲ್ಲ.
ಈಜುಡುಗೆ ಧರಿಸುವ ಮಹಿಳೆಗೆ ದಂಡ ಮತ್ತು ಶಿಕ್ಷೆ ವಿಧಿಸಬೇಕೆಂಬ ಪ್ರಸ್ತಾಪದ ಕಾಯ್ದೆಗೆ ತಿದ್ದುಪಡಿ ತರಲು ಸಂಸದೀಯ ಆಯೋಗದ ಅನುಮೋದನೆ ದೊರೆಯಬೇಕಾಗಿದೆ. ಅಲ್ಲದೇ ಇದು ಕಾನೂನು ರೀತ್ಯಾ ಜಾರಿಗೊಳ್ಳಲು ಸಂಸತ್‌ನಲ್ಲಿಯೂ ಅನುಮೋದನೆ ಪಡೆಯಬೇಕಾದ ಅಗತ್ಯವಿದೆ.
ಆದರೆ ಬೀಚ್‌ಗಳಲ್ಲಿ ಈಜುಡುಗೆ ಧರಿಸುವ ಮಹಿಳೆಗೆ ದಂಡ ಮತ್ತು ಶಿಕ್ಷೆ ವಿಧಿಸಬೇಕೆಂಬ ಐವರು ಸಂಸದರ ಪ್ರಸ್ತಾಪಕ್ಕೆ ಲಿಬರಲ್ ಪಕ್ಷದ ಮಹಿಳಾ ಸಂಸದೆ ಅಸ್ಸೀಲ್ ಅಲ್ ಅವಾಧಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರಸ್ತಾಪವೇ ದೇಶದ ಸಂವಿಧಾನ ವಿರೋಧಿಯಾದದ್ದು ಎಂದು ಆರೋಪಿಸಿದ್ದಾರೆ.