'ವಿಕಿಲೀಕ್ಸ್' ಅಸ್ಸಾಂಜೆ ಜೈಲು ಪಾಲಾಗುವುದು ಇಷ್ಟವಿಲ್ಲ: ತಾಯಿ
ಸಿಡ್ನಿ, ಬುಧವಾರ, 1 ಡಿಸೆಂಬರ್ 2010( 16:07 IST )
PTI
ಅಮೆರಿಕಕ್ಕೆ ದುಸ್ವಪ್ನವಾಗಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಇದೀಗ ದೊಡ್ಡಣ್ಣ ಸೇರಿದಂತೆ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಏತನ್ಮಧ್ಯೆ ಅಸ್ಸಾಂಜೆ ವಿರುದ್ಧ ಇಂಟರ್‌ಪೋಲ್ ರೆಡ್ ಅಲರ್ಟ್ ನೋಟಿಸ್ ಜಾರಿ ಮಾಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಆಸ್ಟ್ರೇಲಿಯ ಮೂಲದ ತಾಯಿ, ನಿಜಕ್ಕೂ ತನ್ನ ಮಗ ಸೆರೆಸಿಕ್ಕಿ ಜೈಲು ಸೇರುವುದನ್ನು ತಾನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಸ್ವೀಡನ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂಲಿಯನ್ ಅಸ್ಸಾಂಜೆಯನ್ನು ಬಂಧಿಸುವಂತೆ ಇಂಟರ್‌ಪೋಲ್ ಆದೇಶ ಹೊರಡಿಸಿದೆ. ಪ್ರಸಕ್ತ ವಾರದಲ್ಲಿ ಅಸ್ಸಾಂಜೆ ವಿಕಿಲೀಕ್ಸ್ ಮೂಲಕ 250,000 ದಾಖಲೆ ಹೊರಹಾಕಿದ ನಂತರ ಈ ಬೆಳವಣಿಗೆ ನಡೆದಿದೆ.
'ನನಗೆ ನನ್ನ ಮಗನ ಒಳಿತೆ ಮುಖ್ಯ ಎಂದು ಅಸ್ಸಾಂಜೆ ತಾಯಿ ಕ್ರಿಸ್ಟಿಯನ್ ಅಸ್ಸಾಂಜೆ ಎಬಿಸಿ ರೇಡಿಯೋ ಜತೆ ಮಾತನಾಡುತ್ತ ತಿಳಿಸಿದ್ದು, ಆತ ನನ್ನ ಮಗ, ನನಗೆ ಅವನೆಂದರೆ ತುಂಬಾ ಪ್ರೀತಿ. ಹಾಗಾಗಿ ಆತ ಸೆರೆಸಿಕ್ಕಿ ಜೈಲು ಸೇರುವುದನ್ನು ನಾನು ಬಯಸುವುದಿಲ್ಲ' ಎಂದು ಅಲವತ್ತುಕೊಂಡಿದ್ದಾರೆ.
ಜೂಲಿಯನ್ ಅಸ್ಸಾಂಜೆ ಬಂಧನದ ಕುರಿತಂತೆ ಅಮೆರಿಕ ಮತ್ತು ಆಸ್ಟ್ರೇಲಿಯ ಸರಕಾರದ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅಮೆರಿಕ ರಾಯಭಾರಿ ಜೆಫ್ ಬ್ಲೈಚ್ ತಿಳಿಸಿದ್ದಾರೆ. ಈ ಬಗ್ಗೆ ಕಾನೂನು ಸಚಿವಾಲಯ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಕ್ಯಾನ್‌ಬೆರ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರತಿಕ್ರಿಯಿಸಿದ್ದಾರೆ.