ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ಮರಳಿ ಸ್ವದೇಶಕ್ಕೆ ಬರುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಪಾಕಿಸ್ತಾನದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ ದೊರೆಗಳು ಒತ್ತಡ ಹೇರಿರುವ ಅಂಶ ಬೆಳಕಿಗೆ ಬಂದಿದೆ.
ಯುಎಇ ದೊರೆಗಳು ಮುಷರ್ರಫ್ ವಾಪಸ್ ಬರಲು ಅವಕಾಶ ಕಲ್ಪಿಸಿಕೊಡುವಂತೆ ಪಾಕಿಸ್ತಾನದ ಪ್ರಮುಖ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಿರುವ ಅಂಶ ವಿಕಿಲೀಕ್ಸ್ ಬಿಡುಗಡೆ ಮಾಡಿರುವ ದಾಖಲೆಗಳಿಂದ ಬಯಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಮುಷರ್ರಫ್ ಅವರು ಪಾಕ್‌ಗೆ ವಾಪಸಾಗುವ ನಿಟ್ಟಿನಲ್ಲಿ ಉತ್ತಮ ವಾತಾವರಣ ಸೃಷ್ಟಿಸುವಂತೆ ಯುಎಇ ದೊರೆಗಳು ಸೂಚಿಸಿದ್ದರು.
ಹಾಗಾಗಿ ಮುಷರ್ರಫ್ ವಿರುದ್ಧ ಅನಾವಶ್ಯಕವಾಗಿ ಕೋರ್ಟ್ ಕೇಸ್ ಹಾಕಿ ಕಿರುಕುಳ ನೀಡಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯುನ್ ಹೇಳಿದೆ.
ಮುಷರ್ರಫ್ ಸಂಬಂಧವಾಗಿ ಯುಎಇ ಮತ್ತು ಪಾಕಿಸ್ತಾನ ನಡುವೆ ಹಲವು ತಿಂಗಳಿನಿಂದ ಮಾತುಕತೆ ನಡೆಯುತ್ತಿತ್ತು. ಆ ನಿಟ್ಟಿನಲ್ಲಿ ಸ್ವಯಂ ಆಗಿ ಗಡಿಪಾರುಗೊಂಡು ಸ್ವದೇಶಕ್ಕೆ ಮರಳಲು ಯತ್ನಿಸುತ್ತಿರುವ ಮುಷರ್ರಫ್ ಅವರ ಹಾದಿ ಸುಗಮಗೊಳಿಸುವ ಅಂತಿಮ ನಿರ್ಧಾರ ಪಾಕಿಸ್ತಾನ ಸರಕಾರವೇ ಕೈಗೊಳ್ಳಬೇಕಾಗಿದೆ ಎಂದು ಯುಎಇ ಸೂಚಿಸಿತ್ತು.