'ಭಾರತದ ಜತೆ ಪುನರ್ ಮಾತುಕತೆ ನಡೆಸಲು ಪಾಕ್‌ಗೆ ಆಸಕ್ತಿ ಇದ್ದಿತ್ತು ಎಂದು ಪಾಕಿಸ್ತಾನದ ಆರ್ಮಿ ವರಿಷ್ಠ ಜನರಲ್ ಅಶ್ಫಾಕ್ ಪರ್ವೆಜ್ ಕಯಾನಿ ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದು, ಆದರೆ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ' ಅಂಶ ವಿಕಿಲೀಕ್ಸ್ ಹೊರಹಾಕಿರುವ ದಾಖಲೆಯಿಂದ ಬಹಿರಂಗಗೊಂಡಿದೆ.
ಮುಂಬೈ ಭಯೋತ್ಪಾದನಾ ದಾಳಿ ನಂತರ ಉಭಯ ದೇಶಗಳ ನಡುವೆ ಸಾಕಷ್ಟು ವಾಗ್ದಾಳಿ ನಡೆದಿತ್ತು. ಅಲ್ಲದೇ ಮಾತುಕತೆ ನಡೆಸುವಂತೆಯೂ ಅಮೆರಿಕ ಒತ್ತಡ ಹೇರಿತ್ತು. ಹಾಗಾಗಿ 2009 ಅಕ್ಟೋಬರ್‌ನಲ್ಲಿ ಕಯಾನಿ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಅನ್ನೆ ಪ್ಯಾಟ್ಟರ್ಸನ್ ಅವರ ಜತೆ ಸುಮಾರು ಎರಡು ಗಂಟೆ ಕಾಲ ಚರ್ಚೆ ನಡೆಸಿದ್ದರೆಂದು ವಿಕಿಲೀಕ್ಸ್ ದಾಖಲೆ ತಿಳಿಸಿದೆ.
ಅಮೆರಿಕಕ್ಕೆ ಸಂಬಂಧಿಸಿದ ಮಹತ್ವದ ರಹಸ್ಯ ದಾಖಲೆಗಳನ್ನು ಜೂಲಿಯನ್ ಅಸ್ಸಾಂಜೆ ವಿಕಿಲೀಕ್ಸ್ ಕೇಬಲ್ ಮೂಲಕ ಹೊರಹಾಕುವ ಮೂಲಕ ದೊಡ್ಡಣ್ಣನ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಅಲ್ಲದೇ ಈ ದಾಖಲೆ ಅಕ್ರಮ ಹಾಗೂ ಅಪರಾಧ ಎಂದು ಅಮೆರಿಕ ಆರೋಪಿಸಿದೆ.
ಪಾಕಿಸ್ತಾನ ಮರಳಿ ಭಾರತದ ಜತೆ ಮಾತುಕತೆ ನಡೆಸಲು ಉತ್ಸುಕವಾಗಿತ್ತು. ಆದರೆ ಜರ್ದಾರಿ ವಿರೋಧ ವ್ಯಕ್ತಪಡಿಸಿದ್ದರು. ಅಮೆರಿಕ ರಾಯಭಾರಿ ಜತೆ ಕಯಾನಿ ಮಾತುಕತೆ ನಡೆಸುವ ವೇಳೆ ಐಎಸ್ಐ ಮುಖ್ಯಸ್ಥ ಅಹ್ಮದ್ ಶೂಜಾ ಪಾಶಾ ಕೂಡ ಭಾಗವಹಿಸಿದ್ದರು ಎಂದು ವಿಕಿಲೀಕ್ಸ್ ವಿವರಿಸಿದೆ.