ಕಳೆದ ವರ್ಷ ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ಸರಕಾರ ಸಾರಿದ್ದ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ತಮಿಳು ನಾಗರಿಕರು ಹತ್ಯೆಯಾಗಿದ್ದಕ್ಕೆ ಅಧ್ಯಕ್ಷ ಮಹೀಂದ ರಾಜಪಕ್ಸೆ ಹಾಗೂ ಮಿಲಿಟರಿ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಅವರೇ ಹೊಣೆ ಎಂದು ವಿಕಿಲೀಕ್ಸ್ ಮಾಹಿತಿ ತಿಳಿಸಿದೆ.
ಸಮರದ ಏಳು ತಿಂಗಳ ನಂತರವೂ ಎಲ್‌ಟಿಟಿಇ ಬಂಡುಕೋರರನ್ನು ವ್ಯವಸ್ಥಿತವಾಗಿ ಹತ್ಯೆಗೈಯಲಾಗಿತ್ತು. ಇದರಲ್ಲಿ ತಮಿಳು ನಾಗರಿಕರು ಸೇರಿದ್ದರು.ಇದಕ್ಕೆ ರಾಜಪಕ್ಸೆ ಮತ್ತು ಅವರ ಸಹೋದರ, ಸರತ್ ಫೋನ್ಸೆಕಾ ಹೊಣೆಗಾರರು ಎಂದು ಶ್ರೀಲಂಕಾದಲ್ಲಿನ ಅಮೆರಿಕ ರಾಯಭಾರಿ ಪ್ಯಾಟ್ರಿಸಿಯ ಎ ಬುಟೆನಿಸ್ ರಹಸ್ಯವಾಗಿ ಅಮೆರಿಕ ಸರಕಾರಕ್ಕೆ ತಿಳಿಸಿರುವ ದಾಖಲೆಯಲ್ಲಿ ವಿವರಿಸಲಾಗಿದೆ ಎಂದು ಆರೋಪಿಸಿದೆ.
ಎಲ್‌ಟಿಟಿಇ ವಿರುದ್ದ ಲಂಕಾ ಸರಕಾರ ನಡೆಸಿದ ಹತ್ಯಾಕಾಂಡದ ಕುರಿತು 2010 ಜನವರಿ 15ರಂದು ಬುಟೇನ್ ಬರೆದ ಪತ್ರವನ್ನು ವಿಕಿಲೀಕ್ಸ್‌ನ ವಿಶ್‌ಟಲ್ ಬ್ಲೋವೆರ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಏತನ್ಮಧ್ಯೆ ವಿಕಿಲೀಕ್ಸ್ ಹೊರಹಾಕಿರುವ 250,000 ದಾಖಲೆಗಳು ಕಾನೂನು ಬಾಹಿರ ಮತ್ತು ಅಪರಾಧ ಎಂದು ಅಮೆರಿಕ ಕಿಡಿಕಾರಿದೆ.