ಸ್ಟಾಕ್ಹೋಮ್, ಗುರುವಾರ, 2 ಡಿಸೆಂಬರ್ 2010( 19:44 IST )
ಲೈಂಗಿಕ ಆರೋಪದಡಿಯಲ್ಲಿ ತನ್ನ ವಿರುದ್ಧ ಹೊರಡಿಸಿರುವ ಬಂಧನದ ಆದೇಶ ಪ್ರಶ್ನಿಸಿ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆ ಸ್ವೀಡನ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಗುರುವಾರ ವಜಾಗೊಳಿಸಿದೆ.
ಅಮೆರಿಕದ ರಹಸ್ಯ ಮಾಹಿತಿಗಳನ್ನು ಆಕ್ಷೇಪದ ನಡುವೆಯೇ ಅಸ್ಸಾಂಜೆ ತನ್ನ ವೆಬ್‌ಸೈಟ್ ಮೂಲಕ ಹೊರಹಾಕಿದ್ದ. ನಂತರ ಲೈಂಗಿಕ ಪ್ರಕರಣದ ಕುರಿತಂತೆ ಸ್ವೀಡನ್ ವಿಕಿಲೀಕ್ಸ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಅಲ್ಲದೇ ಇಂಟರ್‌ಪೋಲ್ ಕೂಡ ನೋಟಿಸ್ ಜಾರಿಗೊಳಿಸುವ ಮೂಲಕ ಅಸ್ಸಾಂಜೆ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಇದೀಗ ಅಸ್ಸಾಂಜೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿ, ತನ್ನ ವಿರುದ್ಧ ಹೊರಡಿಸಿರುವ ಬಂಧನದ ವಾರಂಟ್ ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಿದೆ. ಆ ನಿಟ್ಟಿನಲ್ಲಿ ಸ್ವೀಡನ್ ಮತ್ತು ಅಂತಾರಾಷ್ಟ್ರೀಯ ಬಂಧನ ವಾರಂಟ್ ಕ್ರಮಬದ್ಧ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಂತಾಗಿದೆ.
ಆದರೆ ಸದ್ಯಕ್ಕೆ ಅಸ್ಸಾಂಜೆ ಎಲ್ಲಿ ತಲೆಮರೆಸಿಕೊಂಡಿದ್ದಾರೆಂಬುದು ತಿಳಿದಿಲ್ಲ. ಏತನ್ಮಧ್ಯೆ ಅಸ್ಸಾಂಜೆ ಇಂಗ್ಲೆಂಡ್‌ನ ಆಗ್ನೇಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವುದಾಗಿ ಬ್ರಿಟನ್ ಪತ್ರಿಕೆಯೊಂದು ವರದಿ ಮಾಡಿದೆ.