ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರಿಗೆ ವೀಸಾ ನೀಡಲು ಭಾರತ ನಿರಾಕರಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಾನು ಇನ್ಮುಂದೆ ಯಾವತ್ತೂ ಭಾರತಕ್ಕೆ ಭೇಟಿ ನೀಡಲ್ಲ ಎಂದು ತಿಳಿಸಿದ್ದಾರೆ.
ಶನಿವಾರ ದೆಹಲಿಯಲ್ಲಿ ನಡೆಯಲಿರುವ ವಿಚಾರ ಸಂಕಿರಣವೊಂದರಲ್ಲಿ ಗೌರವ ಅತಿಥಿಯಾಗಿ ಮುಷರ್ರಫ್ ಪಾಲ್ಗೊಳ್ಳಬೇಕಿತ್ತು. ಆದರೆ ಕೇಂದ್ರ ಗೃಹ ಇಲಾಖೆ ಮುಷರ್ರಫ್ ಅವರಿಗೆ ವೀಸಾ ನೀಡದಂತೆ ನಿರ್ಧಾರ ಕೈಗೊಂಡಿತ್ತು.
ಭಾರತ ವೀಸಾ ನಿರಾಕರಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಷರ್ರಫ್, ನಾನು ಯಾವತ್ತೂ ಭಾರತಕ್ಕೆ ಕಾಲಿಡಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತ ತಮ್ಮ ಅತೃಪ್ತಿ ಹೊರಹಾಕಿದ್ದಾರೆ. ನನ್ನ ನಿಷ್ಠೆ ಮತ್ತು ಯೋಗ್ಯತೆ ಬಗ್ಗೆ ನಂಬಿಕೆ ಇದೆ. 2002ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಪಡೆಗಳು ಜಿದ್ದಾಜಿದ್ದಿಗೆ ಬಿದ್ದಾಗಲೂ ಕೂಡ ನಾನು ಕಾಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಿ, ಭಾರತದ ವಿಮಾನಯಾನಕ್ಕೆ ಅನುಮತಿ ನೀಡಿದ್ದೆ ಎಂದು ವಿವರಿಸಿದ್ದಾರೆ.
ಪಾಕ್ ಮಾಜಿ ಅಧ್ಯಕ್ಷ ಮುಷ್ ಅವರಿಗೆ ವೀಸಾ ನೀಡಲು ಭಾರತ ನಿರಾಕರಿಸಿರುವುದು ನಿಜಕ್ಕೂ ಅಚ್ಚರಿ ತಂದಿದೆಯಂತೆ. ಕಾರ್ಗಿಲ್ ಯುದ್ಧದ ಹಿಂದಿನ ಪ್ರಮುಖ ರೂವಾರಿ ನಾನೆಂಬುದನ್ನು ಭಾರತ ನಂಬುತ್ತದೆ ಅಂತ ನಾನು ನಂಬಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.'ಭಾರತದ ನಿಲುವಿನಿಂದ ನಾನು ಎಷ್ಟರ ಮಟ್ಟಿಗೆ ಹತಾಶನಾಗಿದ್ದೇನೆಂಬುದನ್ನು ವಿವರಿಸಲು ಸಾಧ್ಯವಿಲ್ಲ. ನನ್ನ ಭರವಸೆಯ ಮೇಲೆ ಭಾರತದ ಸರಕಾರ ತಣ್ಣೀರೆರಚಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಭಾರತಕ್ಕೆ ನನ್ನ ಎದುರಿಸುವ ವಿಶ್ವಾಸ ಇಲ್ಲದಿರುವುದಕ್ಕಾಗಿಯೇ ವೀಸಾ ನಿರಾಕರಿಸಿದೆ ಎಂದು ಮುಷರ್ರಫ್ ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.