ಜನರಿಗೆ ಸತ್ಯ ಗೊತ್ತಾಗ್ಬೇಕು,ವಿಕಿಲೀಕ್ಸ್ ನಿಷೇಧ ಸಲ್ಲ: ಪಾಕ್ ಕೋರ್ಟ್
ಲಾಹೋರ್, ಶುಕ್ರವಾರ, 3 ಡಿಸೆಂಬರ್ 2010( 19:52 IST )
PTI
ಅಮೆರಿಕದ ರಹಸ್ಯ ಮಾಹಿತಿಯನ್ನು ಹೊರಹಾಕುತ್ತಿರುವ ವಿಕಿಲೀಕ್ಸ್ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನ ಕೋರ್ಟ್ ಶುಕ್ರವಾರ ತಿರಸ್ಕರಿಸಿದ್ದು, ಜನರಿಗೆ ಸತ್ಯ ಏನೆಂಬುದು ಗೊತ್ತಾಗಬೇಕು. ಹಾಗಾಗಿ ನಿಷೇಧಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಜೂಲಿಯನ್ ಅಸ್ಸಾಂಜ್ ಅವರ ವಿಕಿಲೀಕ್ಸ್ ಮೇಲೆ ನಿಷೇಧ ಹೇರಬೇಕೆಂದು ಕೋರಿ ವಕೀಲ ಅರಿಫ್ ಗೋನ್‌ಡಾಲ್ ಗುರುವಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ನ್ಯಾಯಾಧೀಶ ಅಜಾಮತ್ ಸಯೀದ್ ವಜಾಗೊಳಿಸಿ, ಇಂತಹ ವಿಷಯಗಳಲ್ಲಿ 21ನೇ ಶತಮಾನದಲ್ಲಿಯೂ ಜನರನ್ನು ಕತ್ತಲಲ್ಲಿ ಇಡಬೇಕೆಂದು ಬಯಸುವುದು ಸರಿಯಲ್ಲ ಎಂದು ಹೇಳಿದರು.
ವಿಕಿಲೀಕ್ಸ್ ಹೊರಹಾಕುತ್ತಿರುವ ದಾಖಲೆಗಳಿಂದ ಮುಸ್ಲಿಮ್ ರಾಷ್ಟ್ರ ಮತ್ತು ಪಾಕಿಸ್ತಾನದ ನಡುವೆ ಉದ್ದೇಶಪೂರ್ವಕವಾಗಿಯೇ ಅರಾಜಕತೆ ಸೃಷ್ಟಿಸಲಿದೆ ಎಂದು ಗೋನ್‌ಡಾಲಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಅಷ್ಟೇ ಅಲ್ಲ ವಿಕಿಲೀಕ್ಸ್ ದೇಶ ಮತ್ತು ಆಡಳಿತಗಾರ ಮಾನಹಾನಿ ಮಾಡಿರುವುದಾಗಿ ದೂರಿದೆ ಎಂದು ವಾದಿಸಿದ್ದರು.
ಆದರೆ ವಿಕಿಲೀಕ್ಸ್ ದಾಖಲೆ ಬಹಿರಂಗದಿಂದ ಯಾವುದೇ ತೊಂದರೆ ಇಲ್ಲ. ಹಾಗಾಗಿ ಟೀಕೆಗಳನ್ನು ಎದುರಿಸುವ ಧೈರ್ಯವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯವ್ಯಕ್ತಪಡಿಸಿದೆ.